ಬೆಂಗಳೂರು| ಅಕ್ರಮ ಸಂಬಂಧ ಶಂಕೆ: ಪತ್ನಿ, ಪ್ರಿಯಕರನ ಹತ್ಯೆಗೈದು ಪತಿ ಆತ್ಮಹತ್ಯೆ

Update: 2024-10-17 13:51 GMT

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾರೆಂದು ಶಂಕಿಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹತ್ಯೆಗೈದು ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗುರುವಾರ ವರದಿಯಾಗಿದೆ.

ಲಕ್ಷ್ಮಿ(33) ಹಾಗೂ ಗಣೇಶ್‍ಕುಮಾರ್(20) ಎಂಬುವರನ್ನು ಹತ್ಯೆ ಮಾಡಲಾಗಿದೆ. ಅಲ್ಲಿಯೇ, ಗೊಲ್ಲಬಾಬು(41) ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದವರಾದ ಮೂವರೂ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದರು. ಪತ್ನಿ ಲಕ್ಷ್ಮೀ ಎಂಬಾಕೆ ಅಕ್ರಮ ಸಂಬಂಧ ಹೊಂದಿರುವ ಕುರಿತು ಪತಿ ಗೊಲ್ಲಬಾಬು ಅನುಮಾನ ಹೊಂದಿದ್ದ ಎಂದು ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಹೇಳಿದ್ದಾರೆ.

ಅ.16ರ ಬುಧವಾರ ರಾತ್ರಿ ಲಕ್ಷ್ಮೀ ಹಾಗೂ ಗಣೇಶ್ ಕುಮಾರ್ ಜೊತೆಗಿರುವುದನ್ನು ಕಂಡ ಗೊಲ್ಲಬಾಬು, ಇಬ್ಬರನ್ನೂ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಲಕ್ಷ್ಮೀಯ ಸಹೋದರಿಗೆ ಕರೆ ಮಾಡಿ ಹತ್ಯೆಯ ವಿಚಾರವನ್ನು ತಿಳಿಸಿ, ತಾನೂ ಸಾಯುವುದಾಗಿ ಹೇಳಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೊಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News