ಯತ್ನಾಳ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಅನುಮತಿ ವಿಚಾರ : ರಾಜ್ಯ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದ ಬಿಜೆಪಿ
ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲಕತ್ವದ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಹೈಕೋರ್ಟ್ ಆದೇಶ ನೀಡಿದ್ದರೂ ಎನ್‍ಒಸಿ ನೀಡದೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ದೂರಿದ್ದಾರೆ.
ಬುಧವಾರ ಇಲ್ಲಿನ ಎಂಜಿ ರಸ್ತೆಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಕಚೇರಿ ಬಳಿ ಜಮಾಯಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ ಶಾಸಕರಾದ ಸತೀಶ್ ರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ ಸೇರಿದಂತೆ ಪ್ರಮುಖರು, ಎನ್‍ಒಸಿ ನೀಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಯತ್ನಾಳ್ ಅವರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು, ಅವರಿಗೆ ನಾವೆಲ್ಲ ಬೆಂಬಲ ಕೊಟ್ಟಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿ ಸ್ವಾಯತ್ತ ಮಂಡಳಿ. ಆದರೆ ಇದಕ್ಕೆ ಸ್ವಾಯತ್ತ ಇಲ್ಲ. ಸರಕಾರ, ಮಂತ್ರಿಗಳ ಪ್ರಭಾವವಿದೆ. ಮಂಡಳಿ ಅಧಿಕಾರಿಗಳು ಎಲ್ಲದಕ್ಕೂ ಮಂತ್ರಿಗಳ ಕಡೆ ನೋಡುತ್ತಿದ್ದಾರೆ. ಪಿಸಿಬಿಯಲ್ಲಿ ಸೂಟು ಬೂಟು ಧರಿಸಿ ಸೂಟ್‍ಕೇಸ್ ಹಿಡಿದು ಬಂದವರಿಗೆ ಮಾತ್ರ ಅವಕಾಶ ಎನ್ನುವಂತಾಗಿದೆ ಎಂದು ಟೀಕಿಸಿದರು.
ಬಸವರಾಜ ಬೊಮ್ಮಾಯಿ, ಎಲ್ಲವೂ ಕಾನೂನು ಪ್ರಕಾರ ಮಾಡಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಕ್ಕರೆ ಕಾರ್ಖಾನೆ ಶುರು ಮಾಡಿದ್ದರು. ಆದರೆ ಕಳೆದ ವರ್ಷ ಇವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿ ಕಾರ್ಖಾನೆ ಮುಚ್ಚಿಸಿತ್ತು. ಆಗ ಯತ್ನಾಳ್ ಕೋರ್ಟ್ ಮೊರೆ ಹೋದರು. ಕೋರ್ಟ್ ನಾಲ್ಕು ವಾರದೊಳಗೆ ಕಾರ್ಖಾನೆ ಪುನಾರಂಭಕ್ಕೆ ಆದೇಶ ಕೊಟ್ಟಿದ್ದರೂ, ಅನುಮತಿ ಸಿಕ್ಕಿಲ್ಲ ಎಂದರು.