ಗೃಹಮಂಡಳಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಝಮೀರ್ ಅಹ್ಮದ್ ಅಸಮಾಧಾನ
ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿ, ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಗುರುವಾರ ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಅವರ ಜತೆಗೂಡಿ ಮಂಡಳಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಚಿಕ್ಕಜಾಲ ಇಂಟಿಗ್ರೇಟೆಡ್ ಟೌನ್ ಶಿಪ್ ಹಾಗೂ ಕುಂಬಳಗೋಡು ಉಪನಗರ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಗರಂ ಆದರು. ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಿ ಮೂರು ತಿಂಗಳಲ್ಲಿ ಪ್ರಗತಿ ತೋರಿಸುವಂತೆ ನಿರ್ದೇಶನ ನೀಡಿದರು.
ಮಂಡಳಿ ಜಾಮೀನು ಸ್ವಾಧೀನ ಸೇರಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳದ ಹಾಗೂ ಲಕ್ಷಾಂತರ ರೂ. ವ್ಯಯ ಆದರೂ ಒಂದೇ ಒಂದು ಪ್ರಕರಣ ಇತ್ಯರ್ಥ ವಾಗದ ಬಗ್ಗೆ ಸಿಡಿಮಿಡಿಗೊಂಡ ಸಚಿವರು, ಸದ್ಯದಲ್ಲೇ ಅಡ್ವೋಕೆಟ್ ಜನರಲ್ ಜತೆ ಸಭೆ ನಿಗದಿ ಮಾಡುವುದಾಗಿ ತಿಳಿಸಿದರು.
ಗೃಹಮಂಡಳಿ ಮೂಲೆ ನಿವೇಶನ ಹರಾಜು ಹಾಕಿ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ಕೊಡಬೇಕು. ಮೂರು ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ. ಕ್ರೋಢಿಕರಿಸಿ ಹೊಸ ಬಡಾವಣೆ ನಿರ್ಮಿಸಲು ಜಮೀನು ಗುರುತಿಸಬೇಕು ಎಂದು ಝಮೀರ್ ಅಹ್ಮದ್ ಖಾನ್ ಸೂಚನೆ ನೀಡಿದರು.
ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿ, ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಗೃಹ ಮಂಡಳಿ ನಿವೇಶನ ಗಳಿಗೆ ಬೇಡಿಕೆ ಇದ್ದು ಸೂಕ್ತ ರೀತಿಯಲ್ಲಿ ಹೊಸ ಬಡಾವಣೆ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಸಭೆಯಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಕವಿತಾ ಮಣ್ಣಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.