ಬೆಳಗಾವಿ: ಮನೆಯಂಗಳದಿಂದ ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ಮನೆ ಮಾಲಕ

Update: 2024-01-03 05:24 GMT

ಬೆಳಗಾವಿ, ಜ.3: ಅಂಗನವಾಡಿ ಮಕ್ಕಳು ಅಂಗನವಾಡಿ ಪಕ್ಕದಲ್ಲಿದ್ದ ಮನೆಯ ಅಂಗಳಕ್ಕೆ ತೆರಳಿ ಹೂ ಕಿತ್ತ ಕಾರಣಕ್ಕೆ ಮನೆ ಮಾಲಕ ಅಂಗನವಾಡಿ ಸಹಾಯಕಿಯ ಮೂಗನ್ನು ಕತ್ತರಿಸಿದ ಘಟನೆ ಬೆಳಗಾವಿ ತಾಲೂಕಿನ ಬಸುರ್ಗೆ ಗ್ರಾಮದಲ್ಲಿ ಸೋಮವಾರ ನಡೆದಿರುವುದು ವರದಿಯಾಗಿದೆ.

ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ (50) ಕುಡಗೋಲಿನಿಂದ ಹಲ್ಲೆಗೆ ಒಳಗಾದವರು. ಇದೇ ಗ್ರಾಮದ ಕಲ್ಯಾಣಿ ಮೋರೆ ಎಂಬಾತ ಆರೋಪಿ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಸೋಮವಾರ ಅಂಗನವಾಡಿ ಮಕ್ಕಳು ಆಟವಾಡುತ್ತ ಹೋಗಿ ಪಕ್ಕದ ಮನೆಯ ಆವರಣಕ್ಕೆ ತೆರಳಿದ್ದು, ಅಲ್ಲಿ ಬೆಳೆದಿದ್ದ ಕೆಳವು ಹೂಗಳನ್ನು ಕಿತ್ತಿದ್ದಾರೆ. ಇದರಿಂದ ಕೋಪಗೊಂಡ ಮನೆಯ ಮಾಲಕ ಕಲ್ಯಾಣಿ ಮೋರೆ ಮಕ್ಕಳಿಗೆ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಅಂಗವಾಡಿ ಸಹಾಯಕಿ ಸುಗಂಧಾ ಮಕ್ಕಳನ್ನು ಹೊಡೆಯದಂತೆ ಆತನನ್ನು ತಡೆದಿದ್ದಾರೆ. ಈ ವಿಚಾರವಾಗಿ ಅವರ ಮಧ್ಯೆ ವಾಗ್ವಾದ ನಡೆದಿದ್ದು, ಕೋಪಗೊಂಡ ಆರೋಪಿ ಕಲ್ಯಾಣಿ ಕುಡಗೋಲು ತೆಗೆದುಕೊಂಡು ಬಂದು ಏಕಾಏಕಿ ಸುಗಂಧಾ ಮೇಲೆ ಹಲ್ಲೆ ನಡೆಸಿ ಅವರ ಮೂಗು ಕತ್ತರಿಸಿದ್ದಾನೆ ಎಂದು ಮಂಗಳವಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಸುಗಂಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News