ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ : ಭೈರತಿ ಸುರೇಶ್‌ಗೆ ಶೋಭಾ ಕರಂದ್ಲಾಜೆ ಸವಾಲು

Update: 2024-10-27 11:04 GMT

ಬೆಳಗಾವಿ : ಸಚಿವ ಬೈರತಿ ಸುರೇಶ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡುವಿನ ವಾಕ್ಸಮರ ಮುಂದುವರೆದಿದ್ದು, ʼತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿʼ ಎಂದು ಶೋಭಾ ಕರಂದ್ಲಾಜೆ ಅವರು, ಸಚಿವ ಭೈರತಿ ಸುರೇಶ್ ಅವರಿಗೆ ಸವಾಲು ಹಾಕಿದ್ದಾರೆ.

ರವಿವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಭೈರತಿ ಸುರೇಶ್ ‌ಅವರು ಮುಡಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಕಡತಗಳನ್ನು ತಂದು, ಸುಟ್ಟು ಹಾಕಿದ್ದಾರೆ. ಅದರ ಬಗ್ಗೆ ನಾನು ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಬೇರೆ ಬೇರೆ ಆರೋಪಗಳನ್ನು ಅವರು ಮಾಡುತ್ತಿದ್ದಾರೆ‌ʼ ಎಂದು ಕಿಡಿಕಾರಿದರು.

ʼಶೋಭಾ ಕರಂದ್ಲಾಜೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಮಾಡುವುದು ಇಲ್ಲ. ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರನ್ನು ನೇಮಿಸಲಾಗಿದೆ. ಆದರೆ, ಪೊನ್ನಣ್ಣ ಅವರಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ನಕಲಿ ಕಡತ ಸೃಷ್ಟಿಸಲು ಪೊನ್ನಣ್ಣ ಅವರಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ಇಲ್ಲಿಯೂ ಒಂದು ಭ್ರಷ್ಟಾಚಾರ ಮಾಡಲು ಹೊರಟಿದ್ದೀರಿ. ನಿಮ್ಮ ಬಳಿ ಇರುವ ದಾಖಲೆ ತಕ್ಷಣವೇ ಹೊರಗೆ ಹಾಕಿʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಮುಡಾ ಹರಗಣದ ಕುರಿತು ತನಿಖೆ ಈಗಾಗಲೇ ಆರಂಭವಾಗಿದೆ. ಈ ಭಯದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಸಚಿವ ಭೈರತಿ ಸುರೇಶ್ ಅವರಿಗೆ ಈಗ ಸಂಕಷ್ಟ ಶುರುವಾಗಿದೆ. ಅವರು ಮೈಸೂರಿನಿಂದ ಕಡತ ತಂದಿದ್ದು ಸತ್ಯ. ಸುಟ್ಟು ಹಾಕಿದ್ದು ಸತ್ಯʼ ಎಂದು ಆರೋಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News