ಬೆಳಗಾವಿ ಅಧಿವೇಶನ | ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ ಅಂಗೀಕಾರ
ಬೆಳಗಾವಿ(ಸುವರ್ಣ ವಿಧಾನಸೌಧ) : ಕಾರ್ಮಿಕ ಕಲ್ಯಾಣ ಸಚಿವ ಸಂತೋಷ್ ಲಾಡ್ ಪರ್ಯಾಲೋಚನೆಗೆ ತಂದ 2024ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕಕ್ಕೆ ಮಂಗಳವಾರ ವಿಧಾನ ಸಭೆಯಲ್ಲಿ ಅಂಗೀಕಾರ ದೊರೆಕಿತು.
1965ರಲ್ಲಿ ಜಾರಿಗೊಳಿಸಿದ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮದ ಪ್ರಕರಣ 7ಎ ತಿದ್ದುಪಡಿ ಮಾಡಿ ‘ಇಪ್ಪತ್ತು ರೂಪಾಯಿಗಳು, ನಲವತ್ತು ರೂಪಾಯಿಗಳು ಮತ್ತು ಇಪ್ಪತ್ತು ರೂಪಾಯಿಗಳು’ ಎಂಬ ಪದಗಳ ಬದಲಾಗಿ “ಐವತ್ತು ರೂಪಾಯಿಗಳು, ಒಂದು ನೂರೂ ರೂಪಾಯಿಗಳು ಮತ್ತು ಐವತ್ತು ರೂಪಾಯಿಗಳು” ಎಂಬ ಪದಗಳನ್ನು ಅನುಕ್ರಮವಾಗಿ ಪ್ರತಿಯೋಜಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಈ ಹಿಂದೆ ಸಂಗ್ರಹಿಸುತ್ತಿದ್ದ ಕಾರ್ಮಿಕ ಕಲ್ಯಾಣ ನಿಧಿಯಿಂದ ರಾಜ್ಯದಲ್ಲಿ ಸುಮಾರು 40 ಕೋಟಿ ರೂ. ಸಂಗ್ರಹವಾಗುತ್ತಿತ್ತು. ತಿದ್ದುಪಡಿ ವಿಧೇಯಕ ಜಾರಿ ಬಳಿಕ 105 ಕೋಟಿ ರೂ. ಕಲ್ಯಾಣ ನಿಧಿ ಸಂಗ್ರಹವಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿ 49 ಲಕ್ಷ ಸಂಘಟಿತ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಣದಲ್ಲಿ ಅವರಿಗೆ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸದ್ಯ ಜಾರಿ ತಂದ ಯೋಜನೆಗಳಿಗೆ ಹೆಚ್ಚಿನ ಹಣದ ಅವಶ್ಯಕತೆಯಿದೆ. 2023ರಲ್ಲಿ ಕಲ್ಯಾಣ ನಿಧಿಯಡಿ ಕಾರ್ಮಿಕರು ಹಾಗೂ ಕುಟುಂಬ ವರ್ಗದವರು ಸೇರಿ 18 ಸಾವಿರ ಫಲಾನುಭವಿಗಳಿಗೆ 53 ಕೋಟಿ ರೂ. ಖರ್ಚು ಮಾಡಲಾಗಿದೆ. 2024ರಲ್ಲಿ 54 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಚಾಲನಾ ವೃತ್ತಿಯಲ್ಲಿ ತೊಡಗಿರುವವರ ಶ್ರೇಯೋಭಿವೃದ್ಧಿಗಾಗಿ ಸಾರಿಗೆ ಪ್ರಾಧಿಕಾರವನ್ನು ರಚನೆ ಮಾಡಲಾಗಿದೆ. 25 ವಿವಿಧ ಅಲೆಮಾರಿ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರಲು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ ಎಂದು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಬಳಿಕ ವಿಧಾನ ಸಭೆಯಲ್ಲಿ ಧ್ವನಿಮತದ ಮೂಲಕ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಲಭಿಸಿತು.