ಸಂಜಯ ಪಾಟೀಲ್ ನೀಚತನದ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ‌ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2024-04-13 13:58 GMT

ಸಂಜಯ ಪಾಟೀಲ್‌ / ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಬಿಜೆಪಿಯ ಬಹಿರಂಗ ಸಭೆಯಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ನೀಡಿದ ನೀಚತನದ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ನನ್ನ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಂಜಯ ಪಾಟೀಲ ಅವರು, ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಇರುವ ಗೌರವ ಎಂತಹದು ಎನ್ನುವುದನ್ನು ತೋರಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಬಿಜೆಪಿಯವರು ಕೇವಲ ಬಾಯಿ ಮಾತಿನಲ್ಲಿ ರಾಮ ಎಂದರೆ, ಬೇಟಿ ಬಚಾವೋ, ಬೇಟಿ ಪಡಾವೋ ಎಂದರೆ ಸಾಲುವುದಿಲ್ಲ. ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸುವುದು ಹಿಂದೂ ಸಂಸ್ಕೃತಿ. ಸಂಸ್ಕೃತಿ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಂಜಯ ಪಾಟೀಲ ಇಂತಹ ಹೇಳಿಕೆ ಮೂಲಕ ಈ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಇಂತಹ ನೀಚತನದ ಹೇಳಿಕೆ ಖಂಡನೀಯವಾದದ್ದು, ಎಲ್ಲ ಮಹಿಳೆಯರು ಇಂತಹ ಹಿಡನ್ ಅಜೆಂಡಾ ಇಟ್ಟು ಕೊಂಡಿರುವ ಬಿಜೆಪಿಯನ್ನು ತಿರಸ್ಕರಿಸಬೇಕು, ಖಂಡಿಸಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಸಂಜಯ ಪಾಟೀಲ ಈ ರೀತಿಯ ನೀಚ ಹೇಳಿಕೆ ನೀಡುವುದು, ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಹೊಸದೇನಲ್ಲ. ಆದರೆ, ಈ ಹೇಳಿಕೆ ಕೊಡುವ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಸಿಎಂ, ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್, ಸಂಸದೆ ಮಂಗಲಾ ಅಂಗಡಿ ಮತ್ತಿತರರೂ ಇದ್ದರು. ಆದರೆ ಅವರೆಲ್ಲ ನಗುವ ಮೂಲಕ ಪಾಟೀಲ ಹೇಳಿಕೆಗೆ ಸಮ್ಮತಿ ಸೂಚಿಸಿದರೇ ವಿನಃ ಖಂಡಿಸಲಿಲ್ಲ.

ವೇದಿಕೆಯಲ್ಲೇ ಯಾರಾದರೊಬ್ಬರು ಇದನ್ನು ಖಂಡಿಸಿದ್ದರೆ ಬಿಜೆಪಿಗೆ ಮಹಿಳೆಯರ ಬಗ್ಗೆ ಗೌರವ ಇದೆ ಎಂದು ಭಾವಿಸಬಹುದಿತ್ತು. ಆದರೆ ಹಾಗೆ ಮಾಡದೆ ಇರುವುದರಿಂದ ಬಿಜೆಪಿಯ ಮುಖವಾಡ ಕಳಚಿ ಬಿದ್ದಿದೆ. ಇಂತಹ ಹಿಡನ್ ಅಜೆಂಡಾ ಇಟ್ಟುಕೊಂಡಿರುವ ಬಿಜೆಪಿಯನ್ನು ಎಲ್ಲರೂ ತಿರಸ್ಕರಿಸೋಣ ಎಂದು ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಏನಿದು ಘಟನೆ

ಶನಿವಾರ ಹಿಂಡಲಗಾದಲ್ಲಿ ನಡೆದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್, ‘ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ’ .‌ ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ‘ಪೆಗ್‌’ ಹೆಚ್ಚುವರಿ ಕುಡಿಯಬೇಕು’ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News