ಕೋರೋನ ಅವಧಿಯಲ್ಲಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಗರಣ ನಡೆದಿದೆ : ಸಿಎಂ ಸಿದ್ದರಾಮಯ್ಯ

Update: 2024-11-09 15:11 GMT

ಬಳ್ಳಾರಿ: ಕೋರೋನ ಅವಧಿಯಲ್ಲಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಗರಣ ನಡೆದಿದೆ. ಆರೋಗ್ಯ ರಕ್ಷಣೆಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಆಯೋಗ ರಚಿಸಲಾಗಿದೆ, ಪೂರ್ಣ ವರದಿ ಇನ್ನೂ ಕೈ ಸೇರಿಲ್ಲ, ಪತ್ರಿಕೆಯಲ್ಲಿ ಓದಿದ್ದನ್ನು ನನ್ನ ಭಾಷಣದಲ್ಲಿ ಪ್ರಸ್ತಾವ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಶನಿವಾರ ತೋರಣಗಲ್ಲು ಪಟ್ಟಣದ ಜೆಎಸ್‍ಡಬ್ಲ್ಯು ಅತಿಥಿಗೃಹದಲ್ಲಿ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ರಕ್ಷಣೆಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದೆಲ್ಲ ಸುಳ್ಳು ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಬಿಜೆಪಿಯವರು ಎಲ್ಲವನ್ನೂ ಸುಳ್ಳು ಅಂತಾರೆ. ಅವರು ಸುಳ್ಳಿನ ಪಿತಾಮಹ, ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ಹಗರಣಗಳನ್ನು ನಾನು ವಿರೋಧ ಪಕ್ಷದ ನಾಯಕನಾಗಿ ಅಧಿವೇಶನದಲ್ಲಿ ಪ್ರಸ್ತಾವ ಮಾಡಿದ್ದೆ. ಆಯೋಗದ ವರದಿ ಬರಲಿ, ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟಿರುವ ದುರ್ಘಟನೆಗಳು ನಡೆದವು. ಇದನ್ನೂ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಸುಳ್ಳು ಎಂದರು. ನಾನು ಮತ್ತು ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಅಲ್ಲಿ ಸಮಸ್ಯೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಲಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಾಲು ಸಾಲು ಹಗಣರಾಗಲ್ಲಿ ಸಿಲುಕಿದ್ದು, ಶೀಘ್ರದಲ್ಲೇ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವವನು. ನಾನು ಸಣ್ಣ ತಪ್ಪೂ ಮಾಡಿಲ್ಲ, ಮಾಡೋದು ಇಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ 2 ಸಾವಿರ ಕೋಟಿ ರೂ. ಕೊಟ್ಟು ಮುಖ್ಯಮಂತ್ರಿ ಆದರು. ಇವರ ಪುತ್ರ ವಿಜಯೇಂದ್ರ ಕೂಡ ದುಡ್ಡು ಕೊಟ್ಟೇ ಪಕ್ಷದ ಅಧ್ಯಕ್ಷ ಆಗಿದ್ದು ಅಂತ ಯತ್ನಾಳ್ ಹೇಳಿದ್ದಾರೆ. ಇವರಿಗೆ ಸಾವಿರ ಸಾವಿರ ಕೋಟಿ ಎಲ್ಲಿಂದ ಬಂತು? ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕು ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಗೆ ಹಂಚಲು ಹಣ ಇಲ್ಲ ಅಂತ ದೇವೇಗೌಡರು ನೀಡಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅವರ ಮಾತು ಸುಳ್ಳು. ಅಕ್ಟೋಬರ್ ವರೆಗೂ ಒಂದು ತಿಂಗಳು ತಪ್ಪದಂತೆ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ನೀಡಿದ್ದೇವೆ ಅಂದರೆ ಏನು ಅರ್ಥ? ನವೆಂಬರ್ ತಿಂಗಳದ್ದೂ ಸದ್ಯದಲ್ಲೇ ಹಾಕುತ್ತೇವೆ ಎಂದರು.

ಸಂಡೂರಿನ ಎಲ್ಲ ಪಂಚಾಯಿತಿಗಳಿಗೂ ಪ್ರಚಾರಕ್ಕೆ ಹೋಗಿ ಬಂದಿದ್ದೀನಿ. ನಿರೀಕ್ಷೆ ಮೀರಿ ಜನರ ಸ್ಪಂದನೆ ಇದೆ. ಅನ್ನಪೂರ್ಣ ತುಕಾರಾಮ್ ಭರ್ಜರಿ ಗೆಲುವು ದಾಖಲಿಸುವುದು ಖಚಿತ ಎಂದು ಮುಖ್ಯಮಂತ್ರಿ ಭರವಸೆ ವ್ಯಕ್ತಪಡಿಸಿದರು.

ಬಿಜೆಪಿಯವರು ವಕ್ಫ್ ವಿಚಾರವನ್ನು ಉಪಚುನಾವಣೆ ವೇಳೆಯಲ್ಲೇ ಕೃತಕವಾಗಿ ಸೃಷ್ಟಿಸಿರುವುದರ ಹಿಂದಿನ ಉದ್ದೇಶ ಏನು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಬಿಜೆಪಿ ಘೋಷಿಸಿದೆ. ಬಿಜೆಪಿ ಸರಕಾರವೇ 216 ಮಂದಿಯನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು. ಈಗ ನೋಟಿಸ್ ನೀಡಿದವರೇ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News