ಐವಿ ದ್ರಾವಣಕ್ಕಾಗಿ ಹೊಸ ಟೆಂಡರ್, ಆಸ್ಪತ್ರೆಗಳಲ್ಲಿ ಗ್ಲುಕೋಸ್ ಕೊರತೆಯಿಲ್ಲ : ದಿನೇಶ್ ಗುಂಡೂರಾವ್

Update: 2024-12-07 16:53 GMT

ಬಳ್ಳಾರಿ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಬಾಣಂತಿಯರ ಸಾವುಗಳು ಸಂಭವಿಸಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳ್ಳಾರಿ ಜಿಲ್ಲಾಸ್ಪತ್ರೆ ಭೇಟಿ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶ್ರೀರಾಮುಲು ಅವರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಜಿಲ್ಲಾಸ್ಪತ್ರೆಯ ಎದುರೇ ಧರಣಿ ಕುಳಿತಿದ್ದ ಶ್ರೀರಾಮುಲು ಅವರ ಬಳಿ ನೇರವಾಗಿ ತೆರಳಿದ ಸಚಿವ ದಿನೇಶ್ ಗುಂಡೂರಾವ್, ಧರಣಿ ಕೈ ಬಿಡುವಂತೆ ಮನವಿ ಮಾಡಿದರು.‌

ಬಾಣಂತಿಯರ ಸಾವಿನ ವಿಚಾರದಲ್ಲಿ ಪ್ರತಿಭಟಿಸುವುದನ್ನು ನಾನು ವಿರೋಧಿಸಲ್ಲ. ಆದರೆ ಈ ರೀತಿಯ ಸಾವಿನ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣವೇ ನಾನೇ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲದಿಂದ ತಜ್ಞರ ತಂಡವನ್ನು ಕಳಿಸಿ ಎಲ್ಲಿ ಲೋಪದೋಷಗಳಾಗಿವೆ ಎಂದು ವರದಿ ನೀಡುವಂತೆ ಕೇಳಿದ್ದೆ. ಅವರು ನೀಡಿರುವ ವರದಿಯ ಪ್ರಕಾರ ವೈದ್ಯರ ಸೇವೆಯಲ್ಲಿ ಯಾವುದೇ ಕುಂದು ಕೋರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವರ ಸ್ಪಷ್ಟನೆ ಬಳಿಕ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆಯನ್ನು ಕೈಬಿಟ್ಟರು.

ಆಸ್ಪತ್ರೆ ಭೇಟಿ ನೀಡಿ ಆಪರೇಷನ್ ಥಿಯೇಟರ್‌ಗಳನ್ನು ಪರಿಶೀಲಿಸಿದ ಸಚಿವರು, ಸರ್ಜರಿಗಳ ಸಂದರ್ಭದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ ನೀಡಿದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪಶ್ಚಿಮ ಬಂಗಾಳದ ಕಂಪನಿ ಪೂರೈಸಿದ್ದ 192 ಐವಿ ರಿಂಗರ್ ಲ್ಯಾಕ್ಟೇಟ್ ಬ್ಯಾಚ್‌ಗಳನ್ನು ತಡೆಹಿಡಿದಿದ್ದು, ಆಸ್ಪತ್ರೆಗಳಿಂದ ಹಿಂಪಡೆಯಲಾಗಿದೆ. ಕಂಪನಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಸೂಚಿಸಿದ್ದೇನೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಗ್ಲುಕೋಸ್ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ. ಐವಿ ದ್ರಾವಣಕ್ಕಾಗಿ ಹೊಸ ಟೆಂಡರ್ ಪ್ರಕ್ರಿಯೆ ಕೂಡ ನಡೆಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಮೃತ ಬಾಣಂತಿಯರಾದ ನಂದಿನಿ, ಲಲಿತಾ ಹಾಗೂ ಕೂಡ್ಲಗಿಯ ಸುಮಯ್ಯ ಎಂಬವರ ಮನೆಗಳಿಗೆ ಭೇಟಿ ನೀಡಿದ ಆರೋಗ್ಯ ಸಚಿವರು, ಕುಟುಂಬದವಗೆ ಸಾಂತ್ವನ ಹೇಳಿದರು. ಈ ಪ್ರಕರಣದಿಂದ ನೋವುಂಟಾಗಿದೆ. ಬಾಣಂತಿಯರನ್ನು ಆರೈಕೆ ಮಾಡಿ ಜೀವ ಉಳಿಸಲು ಸಾಧ್ಯವಿರುವಾಗ ಈ ರೀತಿಯ ಸಾವುಗಳು ಸಂಭವಿಸಬಾರದು. ಮುಂದೆ ಈ ರೀತಿಯ ಸಾವುಗಳು ಆಗದಂತೆ ಎಚ್ವರಿಕೆ ವಹಿಸುವುದರ ಜೊತೆಗೆ, ಘಟನೆಯಲ್ಲಾದ ಲೋಪದೋಷಗಳನ್ನ ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಖುವುದಾಗಿ ಕುಟುಂಬ ವರ್ಗದವರಿಗೆ ಸಚಿವರು ಭರವಸೆ ನೀಡಿದರು.

ಮೃತ ಬಾಣಂತಿಯರ ಕುಟುಂಬ ವರ್ಗದವರಿಗೆ ಸರಕಾರ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು, ಹೆಚ್ವಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾ‌ಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News