ಬಳ್ಳಾರಿ | ಬಾಣಂತಿಯರ ಸಾವು ಪ್ರಕರಣ ; ಕುಟುಂಬಸ್ಥರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಬಳ್ಳಾರಿ : ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಮೊನ್ನೆಯಷ್ಟೇ ಮೃತಪಟ್ಟ ಬಾಣಂತಿ ಸುಮಯ್ಯಾ ಅವರ ಮನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವರು, ಕೂಡ್ಲಿಗಿಯ ಆಜಾದ್ ನಗರದಲ್ಲಿರುವ ಮೃತ ಸುಮಯ್ಯಾ ಅವರ ಮನೆಗೆ ಭೇಟಿ ನೀಡಿದರು. ಭೇಟಿ ವೇಳೆ ಶಾಸಕ ಎನ್.ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಬಾಣಂತಿಯರ ಸಾವುಗಳಾಗುತ್ತಿರುವುದು ಬೆಳಕಿಗೆ ಬಂದ ತಕ್ಷಣ ತಜ್ಞರ ತಂಡವನ್ನ ರಚಿಸಿ ಸಾವುಗಳಿಗೆ ಕಾರಣವೇನು ಎಂದು ವರದಿ ನೀಡುವಂತೆ ಸೂಚಿಸಿದ್ದೆ. ಈ ರೀತಿಯ ಸಾವುಗಳು ಆಗಬಾರದು. ಮುಂದೆ ಈ ರೀತಿ ಆಗದಂತೆಯೂ ನಾವು ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.
ಮೃತರ ಮನೆಗೆ ಭೇಟಿ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದು ನಮ್ಮ ಕರ್ತವ್ಯ. ಬಿಜೆಪಿಯವರು ಟೀಕೆ ಟಿಪ್ಪಣಿಗಳನ್ನು ಮಾಡಿದ್ದಾರೆ. ಆದರೆ ನನ್ನ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಐವಿ ದ್ರಾವಣದ ಟೆಸ್ಟಿಂಗ್ ಮಾಡಿಸಿದ್ದೇವೆ. ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ಮುಂಜಾಗ್ರತೆ ದೃಷ್ಟಿಯಿಂದ ಐವಿ ರಿಂಗರ್ ಲ್ಯಾಕ್ಟೇಟ್ ಅನ್ನು ರಾಜ್ಯಾದ್ಯಂತ ತಡೆಹಿಡಿದಿದ್ದು, ಯಾವ ಆಸ್ಪತ್ರೆಯಲ್ಲೂ ಬಳಸದಂತೆ ಸೂಚಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.