ಬೀದರ್ | ಮದ್ಯ ವ್ಯಸನಿಗಳು ಮಾದಕ ವಸ್ತುಗಳ ಪೆಡ್ಲರ್‌ ಆಗುತ್ತಿದ್ದಾರೆ : ಅಬಕಾರಿ ಆಯುಕ್ತ ರವಿಶಂಕರ ಎ.

Update: 2025-03-12 19:21 IST

ಬೀದರ್ : ಇಂದಿನ ದಿನಗಳಲ್ಲಿ ಮದ್ಯ ವ್ಯಸನಿಗಳು ಮಾದಕ ವಸ್ತುಗಳ ಪೆಡ್ಲರ್‌ಗಳಾಗುತ್ತಿದ್ದಾರೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ರವಿಶಂಕರ್ ಎ. ಅವರು ಕಳವಳ ವ್ಯಪ್ತಪಡಿಸಿದರು.

ಇಂದು ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ, ಉಪನ್ಯಾಸ, ಬೀದಿನಾಟಕ ಹಾಗೂ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮದ್ಯ ಮತ್ತು ಮಾದಕ ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಯುವ ಜನತೆಯಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ. ಮಹಾನಗರಗಳಲ್ಲಿ ಮೋಜು ಮಸ್ತಿಗಾಗಿ ಸುಶಿಕ್ಷಿತ ಯುವಕರೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇವತ್ತಿನ ಕುಟುಂಬಗಳು ಬೀದಿಗೆ ಬರಲು ಕಾರಣವೇ ಯುವಕರಲ್ಲಿನ ಕೆಟ್ಟ ವ್ಯಸನಗಳಾಗಿವೆ. ಮದ್ಯಪಾನದಿಂದ ಇಂದಿನ ಯುವಕರು ವ್ಯಸನಗಳಿಗೆ ದಾಸರಾಗದೇ ಒಳ್ಳೆಯ ವಿದ್ಯಾರ್ಥಿಗಳಾಗಬೇಕಾಗಿದೆ ಎಂದರು.

ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಠರಾಗಬೇಕಿದೆ. ಡ್ರಗ್ಸ್ ಪೆಡ್ಲರ್‌ ಗಳು ಗಾಂಜಾ, ಅಫೀಮು, ಹೆರಾಯಿನ್, ನಶೆ ಬರುವ ಇನ್ನಿತರ ವಸ್ತುಗಳು ವ್ಯಸನ ಪ್ರೀಯರಿಗೆ ದಾಸರಾಗಲು ಪೂರೈಸುತ್ತಿರುವುದು ದೇಶಕ್ಕೆ ದೊಡ್ಡ ಮಾರಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿಜಯಕುಮಾರ್ ಬಾವಗೆ ಅವರು ಮಾತನಾಡಿ, ಡ್ರಗ್ಸ್ ಎಂಬುದು ಆದಿ ಕಾಲದಿಂದಲೂ ಬಂದಿದ್ದು, ಆದರೆ ಅದನ್ನು ಉಪಯೋಗಿಸುವ ವಿಧಾನ ಸರಿ ಇಲ್ಲ. ಈಗಿನ ಯುವಕರು, ದುಡಿಯುವ ವರ್ಗದ ಜನರು ಸೇರಿದಂತೆ ಶಿಕ್ಷಣವಂತರೆ ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಪೋಷಕರು ಮಕ್ಕಳ ಕಡೆ ಗಮನ ಹರಿಸಿದೇ ಇರುವುದರಿಂದ ವಿದ್ಯಾರ್ಥಿಗಳು ಇದರ ವ್ಯಸನಿಗಳಾಗುತ್ತಿದ್ದಾರೆ. ಅದಲ್ಲದೇ ಸಹವಾಸ ದೋಷದಿಂದಲೂ ಕೂಡ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕುಟುಂಬದ ಒಬ್ಬ ವ್ಯಸನಿಯಿಂದ ಇಡೀ ಕುಟುಂಬ ಹಾಳಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ತಿಳುವಳಿಕೆ ಹೇಳಿದರು.

ಈ ಸಂದರ್ಭದಲ್ಲಿ ವಚನ ಚಾರಿಟೇಬಲ್ ಸೊಸೈಟಿಯ ನಿರ್ದೇಶಕಿ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬಳೆ, ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದೇವೇಂದ್ರ ಹಂಚೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಶಿವಶಂಕರ್ ಟೋಕರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ ಹಾಗೂ ಅಬಕಾರಿ ಇಲಾಖೆಯ ವೃತ್ತ ನಿರೀಕ್ಷಕ ಅನಿಲಕುಮಾರ್ ಸೇರಿದಂತೆ ಇಂಜಿನಿಯರಿಂಗ್ ಕಾಲೇಜಿನ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News