ಜಗದ್ಗುರು ರೇಣುಕಾಚಾರ್ಯರ ಸಂದೇಶಗಳು ಎಲ್ಲಾ ಕಾಲಕ್ಕೂ ಅಜರಾಮರವಾಗಿವೆ : ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

Update: 2025-03-12 19:24 IST
Photo of Program
  • whatsapp icon

ಬೀದರ್ : ಜಗದ್ಗುರು ರೇಣುಕಾಚಾರ್ಯರ ಸಂದೇಶಗಳು ಎಲ್ಲಾ ಕಾಲಕ್ಕೂ ಮಾನವ ಕುಲಕ್ಕೆ ಅಜರಾಮರವಾಗಿವೆ. ಇಡೀ ಮಾನವ ಕುಲಕ್ಕೆ ಒಳಿತು ಮಾಡಿರುವ ಅವರ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶವು ಸಾಧು ಸಂತರ, ಮಹಾತ್ಮರ, ಮಹಾನ್ ಜ್ಞಾನಿಗಳ, ದಾರ್ಶನಿಕರ, ಬಸವಾದಿ ಶರಣರ ದೇಶವಾಗಿದೆ. ಅನೇಕ ಮಹಾತ್ಮರ ಸಿದ್ಧಾಂತಗಳು, ತತ್ವ ಬೋಧನೆಗಳು ಒಳಗೊಂಡ ದೇಶ ನಮ್ಮದಾಗಿದೆ. ಅಂತಹ ಮಹಾತ್ಮರಲ್ಲಿ ಮಹಾನ್ ಜ್ಞಾನಿಗಳಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಾಜವನ್ನು ಒಂದುಗೂಡಿಸಿ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಬೇಮಳಖೇಡಾ, ಗೋರ್ಟಾ ಹಿರೇಮಠದ ಡಾ.ರಾಜಶೇಖರ್ ಶಿವಾಚಾರ್ಯ ಸ್ವಾಮಿ ಮಾತನಾಡಿ, ಗುರು ಶಿಷ್ಯರ ನಡುವಿನ ಅವಿನಾಭಾವ ಸಂಬಂಧವೇ ವೀರಶೈವ ಲಿಂಗಾಯತ ಧರ್ಮದ ಪರಂಪರೆಯಾಗಿದೆ. ಸರ್ವರ ಕಲ್ಯಾಣಕ್ಕಾಗಿಯೇ ಜನ್ಮತಾಳಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಈ ಸಮಾಜಕ್ಕೆ ಅಪಾರವಾಗಿದೆ. ರೇಣುಕಾಚಾರ್ಯರು ತಮ್ಮ ಶಿಷ್ಯರಾದ ಅಗಸ್ತ್ಯ ಮಹರ್ಷಿಗಳಿಗೆ ತಮ್ಮ ಬೋಧನೆಗಳನ್ನು ಭೋಧಿಸಿದರೆಂದು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಕಾಣಬಹುದು. ಹಾಗೆಯೇ ಲಂಕೆಯಲ್ಲಿ 3 ಕೋಟಿ ಲಿಂಗಗಳನ್ನು ಸ್ಥಾಪಿಸಿರುವುದು ಈ ಗ್ರಂಥದಿಂದ ತಿಳಿದು ಬಂದಿದೆ ಎಂದು ಇತಿಹಾಸ ತಿಳಿಸಿದರು.

ಕಲಬುರಗಿ ಕೇಂದ್ರಿಯ ವಿಶ್ವ ವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಾಯನ ಕೇಂದ್ರ ಸ್ಥಾಪಿಸಬೇಕು. ಬೀದರ್ ನಗರದಲ್ಲಿ ರೇಣುಕಾಚಾರ್ಯರ ವೃತ್ತ ನಿರ್ಮಾಣಕ್ಕೆ ಜಾಗ ಮತ್ತು ಅನುಮತಿ ನೀಡಬೇಕು ಎಂದು ಅಪರ್ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಅವರು ಮನವಿ ಮಾಡಿದರು.

ಈ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಕಚೇರಿ ಮುಂಭಾಗದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಅಪರ್ ಜಿಲ್ಲಾಧಿಕಾರಿ ಶಿವುಕುಮಾರ್ ಶೀಲವಂತ್, ನಿರಗುಡಿ ಹವಾ ಮಲ್ಲಿನಾಥ್ ಮಹಾರಾಜ್, ದಿಶಾ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ನಗರಸಭೆ ಸದಸ್ಯ ದಿಗಂಬರ್ ಮಡಿವಾಳ್, ಸಿದ್ದು ಫುಲಾರಿ, ವಿಶ್ವಲಿಂಗ್ ಸ್ವಾಮಿ, ವೈಜಿನಾಥ್ ಕಮಠಾಣೆ, ಶಿವಶರಣಪ್ಪ ವಾಲಿ, ರಾಮಕೃಷ್ಣ ಸಾಳೆ, ಈಶ್ವರಸಿಂಗ್ ಠಾಕೂರ್, ರವಿಂದ್ರ ಸ್ವಾಮಿ ಹಾಗೂ ಮಹೇಶ್ವರ್ ಸ್ವಾಮಿ ಸೇರಿದಂತೆ ಸಮಾಜದ ಇತರ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News