ಹನೂರು | ಭಾರೀ ಗಾಳಿಮಳೆಗೆ ಹಾರಿದ ಮನೆಯ ಹೆಂಚು, ಮನೆಗಳಿಗೆ ನುಗ್ಗಿದ ಚರಂಡಿ ನೀರು
ಚಾಮರಾಜನಗರ, ಮೇ 7: ಇಂದು ಮುಂಜಾನೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಮನೆಯೊಂದರ ಹೆಂಚುಗಳು ಹಾರಿ ಹೋಗಿರುವ ಘಟನೆ ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸತ್ಯಮಂಗಲ ಗ್ರಾಮದಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಮುಂಜಾನೆ ಈ ಪ್ರದೇಶದಲ್ಲಿ ಭಾರೀ ಗಾಳಿಮಳೆಯಾಗಿದೆ. ಇಂದು ಮುಂಜಾನೆ ಬೀಸಿದ ಗಾಳಿಗೆ ಸತ್ತಿಮಂಗಲ ಗ್ರಾಮದ ವೆಂಕಟೇಶ್ ಮೂರ್ತಿ ಹಾಗೂ ಸುಂದರ್ ಎಂಬವರು ವಾಸವಿದ್ದ ಮನೆಯ ಹೆಂಚುಗಳು ಸಂಪೂರ್ಣ ಹಾರಿ ಹೋಗಿದೆ. ಇದರಿಂದ ಮಳೆಯ ನೀರು ಮನೆಯೊಳಗೆ ಸೇರಿ ಅಪಾರ ನಾಶನಷ್ಟ ಸಂಭವಿಸಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಮುಂಜಾನೆ ಅಬ್ಬರದ ಮಳೆಯಾಗಿದೆ. ಜಿಲ್ಲೆಯ ಹಲವೆಡೆ ಮಳೆಯ ನೀರು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಹನೂರು ಪಟ್ಟಣದ ಏಳನೇ ವಾರ್ಡ್ ನ ಶಬಿನ್ ತಾಜ್ ಎಂಬವರ ಮನೆ ಸೇರಿ ಕೆಲ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.
ಹನೂರು ಪಟ್ಟಣದಲ್ಲಿ ಚರಂಡಿ ಕೆಲಸ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ಮಳೆ ಬಂದಾಗ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗದೆ ಮನೆಗಳಿಗೆ ನುಗ್ಗಿದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.