ಕಳಸ: ನೆರೆ ನೀರಿನಿಂದ ಮುಳುಗಡೆಯಾಗಿದ್ದ ಸೇತುವೆ ಮೇಲೆ ಜೀಪ್ ಓಡಿಸಿದ ಆರೋಪ; ಚಾಲಕನ ಬಂಧನ
ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಮುಳುಗಡೆಯಾಗಿದ್ದ ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಿದ್ದರೂ ಇದನ್ನು ಲೆಕ್ಕಿಸದೇ ಸೇತುವೆ ಮೇಲೆ ಜೀಪ್ ಓಡಿಸಿ ಹುಚ್ಚಾಟ ಮೆರೆದು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದ ಜೀಪ್ ಚಾಲಕನನ್ನು ಕಳಸ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪವನ್ ಕುಮಾರ್ (30)ಬಂಧಿತ ಜೀಪ್ ಚಾಲಕನಾಗಿದ್ದು, ಜೀಪ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಈತ ಕಳೆದ ಗುರುವಾರ ಭದ್ರಾ ನದಿ ತುಂಬಿ ಹರಿದ ಪರಿಣಾಮ ಮುಳುಗಡೆಯಾಗಿದ್ದ ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಓಡಿಸಿದ್ದ ಎಂದು ತಿಳಿದು ಬಂದಿದೆ.
ಸೇತುವೆ ಮುಳುಗಡೆಯಿಂದಾಗಿ ಕಳಸ- ಹೊರನಾಡು ಸಂಪರ್ಕ ಕಡಿತಗೊಂಡಿತ್ತು. ಸೇತುವೆ ಮೇಲೆ ಭದ್ರಾ ನದಿಯ ನೆರೆ ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ಪ್ರಾಣಾಪಾಯ ತಪ್ಪಿಸುವ ಉದ್ದೇಶದಿಂದ ಸೇತುವೆಗೆ ಬ್ಯಾರಿಕೇಡ್ ಹಾಕಲಾಗಿತ್ತು. ಈ ವೇಳೆ ಜೀಪ್ ನಲ್ಲಿ ಸೇತುವೆ ಬಳಿ ಬಂದಿದ್ದ ಪವನ್ ಕುಮಾರ್ ಸಂಚಾರ ನಿಷೇಧ ಲೆಕ್ಕಿಸದೇ ಸೇತುವೆ ಮೇಲೆ ಜೀಪ್ ಓಡಿಸಿದ್ದ.
ಈ ವೇಳೆ ನೀರಿನ ರಭಸಕ್ಕೆ ಜೀಪ್ ತೇಲಾಡಿ ಸೇತುವೆ ಅಂಚಿಗೆ ಹೋಗಿತ್ತು, ಆದರೆ ಚಾಲಕ ಜೀಪ್ ನಿಯಂತ್ರಿಸಿ ನೀರು ಪಾಲಾಗುವುದರಿಂದ ಪಾರಾಗಿದ್ದ, ಈ ಘಟನೆಯ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಳಸ ಪೊಲೀಸರು ಚಾಲಕ ಹಾಗೂ ಜೀಪ್ ವಶಕ್ಕೆ ಪಡೆದು ಕಾನೂನು ಕ್ರಮಕೈಗೊಂಡಿದ್ದಾರೆ.