ʼಶಕ್ತಿʼ ಸೇರಿದಂತೆ ಯಾವ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ : ಸಚಿವ ಕೆ.ಜೆ.ಜಾರ್ಜ್
ಚಿಕ್ಕಮಗಳೂರು : ʼಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದು ವಿರೋಧ ಪಕ್ಷದವರು ಈ ಹಿಂದೆ ಹೇಳುತ್ತಿದ್ದರು. ಆದರೆ ನಾವು ಜಾರಿ ಮಾಡಿ ತೋರಿಸಿದ್ದೇವೆ. ಸಿ.ಟಿ.ರವಿ ಸೇರಿದಂತೆ ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಮೇಲೆ ಇಂತಹ ಪ್ರಶ್ನೆ ಅಪ್ರಸ್ತುತʼ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ಹೇಳಿದ್ದಾರೆ.
ಶಕ್ತಿ ಯೋಜನೆಯನ್ನು ಮರುಪರಿಶೀಲಿಸುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶುಕ್ರವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, "ಯಾವ ಗ್ಯಾರಂಟಿ ಯೋಜನೆಗಳನ್ನೂ ಮರುಪರಿಶೀಲನೆ ಮಾಡುವುದಿಲ್ಲ. ಶಕ್ತಿ ಯೋಜನೆ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳೂ ಮುಂದುವರಿಯಲಿವೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಡಿಸಿಎಂ ಕೂಡ ಸ್ಪಷ್ಟನೆ ನೀಡಿದ್ದಾರೆ" ಎಂದರು.
ಗ್ಯಾರಂಟಿ ಯೋಜನೆಗಳು ಪಂಚರ್ ಆಗಿವೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʼಸಿ.ಟಿ.ರವಿ ವಿರೋಧ ಪಕ್ಷದ ಓರ್ವ ನಾಯಕ, ಟೀಕೆ ಮಾಡುವುದೇ ಅವರ ಕೆಲಸ. ಸರಕಾರವೊಂದು ಜನಪರ ಯೋಜನೆಗಳನ್ನು ಜಾರಿ ಮಾಡಿದಾಗ ವಿರೋಧ ಪಕ್ಷಗಳು ಅದನ್ನು ಪ್ರಶಂಸಿಸಬೇಕು. ಆದರೆ ಸಿ.ಟಿ.ರವಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಸರಕಾರದ ಒಳ್ಳೆಯ ಯೋಜನೆಗಳನ್ನು ಒಪ್ಪುವುದೇ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದೇ ಇಲ್ಲ, ಎಲ್ಲ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲಿವೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದು ಜನರಲ್ಲಿ ಗೊಂದಲ ಮೂಡಿಸುವ ಕೆಲಸ. ಗ್ಯಾರಂಟಿ ಯೋಜನೆಗಳಿಂದಾಗಿ ಜನರಿಗೆ ಒಳ್ಳೆಯದಾಗುತ್ತಿದೆʼ ಎಂದರು.
ವಕ್ಫ್ ಬೋರ್ಡ್ ಆಸ್ತಿ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಅವರು, "ಕೆಲ ರೈತರ ಜಮೀನುಗಳಿಗೆ ಸಂಬಂಧಿಸಿದಂತೆ ಕೆಲವೆಡೆ ತಪ್ಪಾಗಿರುವುದನ್ನು ಸಿಎಂ, ವಕ್ಫ್ ಬೋರ್ಡ್ ಅಧ್ಯಕ್ಷರು, ಕಂದಾಯ ಸಚಿವರೇ ಹೇಳಿಕೆ ನೀಡಿದ್ದಾರೆ. ಯಾವ ರೈತರ ಜಮೀನನ್ನು ರದ್ದು ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿರುವುದರಿಂದ ಈ ವಿಚಾರ ಮುಗಿದ ಅಧ್ಯಾಯ" ಎಂದರು.