ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ಕಾಮಗಾರಿಗೆ ಭೂಮಿ ನೀಡುವ ರೈತರಿಗೆ ಸೂಕ್ತ ಪರಿಹಾರ: ಡಿಸಿಎಂ ಡಿಕೆಶಿ

Update: 2024-03-04 13:32 GMT

ಚಿಕ್ಕಮಗಳೂರು: ಜಿಲ್ಲೆ ಸೇರಿದಂತೆ ರಾಜ್ಯದ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಉಪಯೋಗ ಆಗಲಿರುವ ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ನೀಡಿ ರೈತರು ಸಹಕರಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ತರೀಕೆರೆ ಅಜ್ಜಂಪುರದ ಅಬ್ಬಿನಹೊಳಲು ಗ್ರಾಮದಲ್ಲಿ ರವಿವಾರ ಸಂಜೆ ಭದ್ರಾ ಮೇಲ್ದಂಡೆ ಯೋಜನೆ ಶಾಖಾ ಕಾಲುವೆಯಡಿ ಬರುವ ಸಂತ್ರಸ್ಥ ರೈತರ ಸಂಧಾನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಭೂಮಿ ಕಳೆದುಕೊಳ್ಳುವ ಸಂತ್ರಸ್ಥ ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರ ಕೊಡಿಸುವುದು ನನ್ನ ಜವಾಬ್ದಾರಿ. ಸಭೆಯಲ್ಲಿ ಪರಿಹಾರ ಮೊತ್ತವನ್ನು ನಾನು ಘೋಷಣೆ ಮಾಡಲು ಬರುವುದಿಲ್ಲ. ಇದೊಂದು ಕಡೆ ಘೋಷಣೆ ಮಾಡಿದರೆ ಎಲ್ಲಾ ನೀರಾವರಿ ಯೋಜನೆಗಳ, ರಾಜ್ಯದ ಎಲ್ಲಾ ಭಾಗಗಳ ರೈತರು ಇಷ್ಟೇ ಮೊತ್ತದ ಪರಿಹಾರ ಕೇಳುತ್ತಾರೆ. ಆ ರೀತಿ ಘೋಷಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಎಲ್ಲಾ ರೈತರು ಬೆಂಗಳೂರಿಗೆ ಬಂದರೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಈ ಭಾಗದ ಶಾಸಕರು, ಗುತ್ತಿಗೆದಾರರ ಜೊತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡುತ್ತೇವೆ" ಎಂದರು.

ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ಬಳಿ ನೀರು ಸಂಗ್ರಹಣ ಅಣೆಕಟ್ಟು ನಿರ್ಮಾಣ ವಿಚಾರದಲ್ಲೂ ಇದೇ ರೀತಿ ತೊಂದರೆಯಾಗಿ, ಅಣೆಕಟ್ಟು ನಿರ್ಮಾಣದ ಜಾಗವನ್ನೇ ಸ್ಥಳಾಂತರ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ರೈತರಿಗೆ ಮನವರಿಕೆ ಮಾಡಿದ ಡಿಸಿಎಂ, ಸಂತ್ರಸ್ಥ ರೈತರು ನ್ಯಾಯಲಯದಲ್ಲಿ ದಾವೆ ಹೂಡಿದ್ದು, ನ್ಯಾಯಲಯ ಹೇಳಿದಷ್ಟು ಮೊತ್ತ ನೀಡಬೇಕಾಗುತ್ತದೆ. ಆದರೆ ಅಲ್ಲಿಯ ತನಕ ಕಾಲಹರಣ ಮಾಡಿದರೆ ಯೋಜನೆ ಮುಂದುವರಿಯುವುದಿಲ್ಲ. ಇದರಿಂದ ಜಿಲ್ಲೆ ಹಾಗೂ ಫಲಾನುಭವಿ ಜಿಲ್ಲೆಗಳ ರೈತರರಿಗೂ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಎಲ್ಲಾ ರೈತರು ಸಮಾನ ಪರಿಹಾರ ಪಡೆಯಬೇಕು ಎನ್ನುವುದೇ ನನ್ನ ಉದ್ದೇಶ. ನಾನೂ ಸಹ ರೈತನೇ. ನನ್ನ ಜೇಬಿನಿಂದ ಪರಿಹಾರ ಕೊಡುವುದಾದರೆ ಕೊಡಬಹುದು. ಇಲ್ಲಿ ಪರಿಸ್ಥಿತಿ ಬೇರೆ ಇದೆ. ಇಲ್ಲಿನ ಶಾಸಕರು 33 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಶಾಸಕರ  ಮಾತಿಗೆ ಬೆಲೆ ನೀಡಿದಂತೆ ನನ್ನ ಮಾತಿಗೂ ಬೆಲೆ ನೀಡಿ. ಈ ಭದ್ರಾ ಮೇಲ್ದಂಡೆ ಯೋಜನೆ ಕಾಂಗ್ರೆಸ್ ಸರಕಾರ ಯೋಜನೆಯಲ್ಲ ರೈತರ ಯೋಜನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News