ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಅಭಿಯಾನ; ಹಾಲಿ ಸಂಸದೆಗೆ ಮತ್ತೆ ಟಿಕೆಟ್ ನೀಡಿದರೆ 1 ಲಕ್ಷ ನೋಟಾ ಮತ ಚಲಾಯಿಸುವ ಎಚ್ಚರಿಕೆ

Update: 2024-03-02 16:05 GMT

ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಫಿನಾಡಿನಲ್ಲಿ ಗೋ ಬ್ಯಾಕ್ ಅಭಿಯಾನ ಮುಂದುವರಿದಿದ್ದು, ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿಯೂ ಟಿಕೆಟ್ ನೀಡಿದರೆ 1ಲಕ್ಷ ನೋಟಾ ಮತಗಳನ್ನು ಚಲಾಯಿಸಲಾಗುವುದು ಎಂದು ʼಸನಾತನ ಹಿಂದುತ್ವʼ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಹಾಕಲಾಗಿದೆ.

ಲೋಕಸಭೆ ಚುನಾವಣೆಗೆ ದಿನಗಣನೇ ಆರಂಭವಾಗಿರುವ ಹೊತ್ತಿನಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ನಾನೇ ಎಂದು ಹೇಳಿಕೊಂಡು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಸಂಸದೆ ಶೋಭಾ ಅವರಿಗೆ ಕಾಫಿನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿಗೆ ಶೋಭಾ ಅವರಿಗೆ ಟಿಕೆಟ್ ನೀಡಬಾರದು, ಹೊಸಬರಿಗೆ ಟಿಕೆಟ್ ನೀಡಬೇಕು, ಸಿ.ಟಿ.ರವಿ, ಜೀವರಾಜ್ ಅವರಿಗೆ ಟಿಕೆಟ್ ನೀಡಬೇಕು. ಶೋಭಾ ಅವರು ಸಂಸದೆಯಾದ ಬಳಿಕ ಕ್ಷೇತ್ರಕ್ಕೆ ಬರುವುದಿಲ್ಲ, ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಈ ಹಿಂದೆ ಪತ್ರ ಚಳವಳಿ ಆರಂಭಿಸಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದ ಮಧ್ಯೆ ಚಿಕ್ಕಮಗಳೂರಿಗೆ ಆಗಮಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರೂ, ಶೋಭಾ ಅವರೇ ಅಭ್ಯರ್ಥಿ, ಈ ಬಾರಿ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ನಡುವೆಯೂ ಗೋ ಬ್ಯಾಕ್ ಶೋಭಾ ಅಭಿಯಾನ ಕಾಫಿನಾಡಿನಲ್ಲಿ ಮುಂದುವರಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಅಭಿಯಾನದ ಪೋಸ್ಟ್‌ ಗಳು ವೈರಲ್‌ ಆಗಿದೆ. ಈ ಬಾರಿ ಮತ್ತೆ ಶೋಭಾ ಅವರಿಗೆ ಲೋಕಸಭೆ ಟಿಕೆಟ್ ನೀಡಿದರೆ 1 ಲಕ್ಷ ನೋಟಾ ಮತಗಳನ್ನು ಚಲಾಯಿಸಲಾಗುವುದು ಎಂಬ ಪೋಸ್ಟ್ ವೈರಲ್‌ ಆಗಿದೆ.

"ಕಳೆದ ಬಾರಿಗಿಂತ ಹೆಚ್ಚು ಮತಗಳಿಂದ ಶೋಭಾ ಈ ಬಾರಿ ಗೆಲ್ಲುತ್ತಾರೆಂದು ಯಡಿಯೂರಪ್ಪ ಹೇಳಿ ಹೋಗಿದ್ದಾರೆ. ಶೋಭಾ ಅವರಿಗೆ ಟಿಕೆಟ್ ನೀಡದರೆ ನಾವು 1 ಲಕ್ಷ ನೋಟಾ ಮತ ಚಲಾಯಿಸುತ್ತೇವೆ, ಆಗ ಅವರಿಗೆ 1 ಲಕ್ಷ ಮತ ಕಡಿಮೆಯಾಗುತ್ತದೆ. ಮೋದಿ ಹೆಸರಿನಲ್ಲಿ ಗೆಲ್ಲುತ್ತಿರುವ ಶೋಭಾ ಅವರು ಮೋದಿ ಅವರಿಗೆ ಕಳಂಕ ತಂದಿದ್ದಾರೆ. ಶೋಭಕ್ಕನ ವಿರುದ್ಧ ಸ್ವಚ್ಛ ಭಾರತ ಮಿಷನ್ ಪ್ರಾರಂಭಮಾಡಿರುವ ಸನಾತನಿಗಳು ನಾವು ಎಂದು ಸನಾತನ ಹಿಂದುತ್ವ ಎಂಬ ಪೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News