ಚಿಕ್ಕಮಗಳೂರು: ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಚಿಕ್ಕಮಗಳೂರು: ತುಂಬುಗರ್ಭಿಣಿ ಮಹಿಳೆಯೊಬ್ಬರನ್ನು ಹೆರಿಗೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಬೆಳಗೋಡು ಗ್ರಾಮದ ಮಹಿಳೆಯನ್ನ 108 ಆಂಬುಲೆನ್ಸ್ನೆಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆಸ್ಪತ್ರೆ ತಲುಪಲು ಇನ್ನೂ 15 ಕಿ.ಮೀ. ದೂರವಿದ್ದು, ಹೆರಿಗೆ ನೋವು ಅತಿಯಾದ ಹಿನ್ನೆಲೆಯಲ್ಲಿ ಶುಶ್ರೂಕಿ ಮಂಜುಳಾ ಅವರು ಆಂಬುಲೆನ್ಸ್ ನಲ್ಲೇ ಮಹಿಳೆಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಚಾಲಕ ವಾಹನವನ್ನು ನಿಲ್ಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು. ತಾಯಿ ಮಗು ಆರೋಗ್ಯವಾಗಿದ್ದಾರೆಂದು ಮಹಿಳೆಯ ಜೊತೆಗಿದ್ದ ಅವರ ಪತಿ ಮಾಹಿತಿ ನೀಡಿದ್ದಾರೆ.
108 ಆಂಬುಲೆನ್ಸ್ ನಲ್ಲಿ ಮಹಿಳೆಯ ಜೊತೆಗಿದ್ದ ಶುಶ್ರೂಕಿ ಮಂಜುಳಾ ಮತ್ತು ಚಾಲಕ ಗಂಗಾಧರ್ ಅವರ ಸಮಯ ಹಾಗೂ ಕರ್ತವ್ಯಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.