ಚಿಕ್ಕಮಗಳೂರು : ಬೆಂಕಿಯಿಂದ ಕಾಡಿನ ರಕ್ಷಣೆಗೆ ಅರಣ್ಯ ಇಲಾಖೆ ಸಜ್ಜು
ಚಿಕ್ಕಮಗಳೂರು: ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಅರಣ್ಯ ಪ್ರದೇಶಗಳ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಿಡಿಗೇಡಿಗಳಿಂದಾಗಿ ಕಾಡಿಗೆ ಬೆಂಕಿ ಬೀಳುತ್ತಿದೆ. ಇದರ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಸಜ್ಜಾದೆ. ಬೆಂಕಿ ಬೀಳುವ ಪ್ರದೇಶಗಳನ್ನು ಗುರುತಿಸಿ ಅಂತಹ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ರೇಖೆ ನಿರ್ಮಿಸಿರುವುದಲ್ಲದೇ ಬೆಂಕಿ ನಿಯಂತ್ರಣಕ್ಕಾಗಿ ಜಿಲ್ಲಾದ್ಯಂತ 165 ಅರಣ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಕಿ ಪತ್ತೆಗೆ ಡ್ರೋಣ್ ಕ್ಯಾಮರವನ್ನೂ ಬಳಸಲಾಗುತ್ತಿದೆ. ವಾಚ್‍ಟವರ್ ನಿರ್ಮಿಸಿ ಅರಣ್ಯದಲ್ಲಿ ಕಾಣಿಸಿಕೊಳ್ಳುವ ಬೆಂಕಿ ಮೇಲೆ ನಿಗಾವಹಿಸಲು ಅರಣ್ಯ ಇಲಾಖೆ ಸಜ್ಜಾಗಿದೆ.
ಚಿಕ್ಕಮಗಳೂರು ಜಿಲ್ಲೆ ಅಪಾರ ವನ್ಯಸಂಪತ್ತನ್ನು ಹೊಂದಿರುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಪಶ್ಚಿಮಘಟ್ಟದ ಗಿರಿಶ್ರೇಣಿಗಳೂ ಸೇರಿದಂತೆ ಅಭಯಾರಣ್ಯಗಳು, ಧಟ್ಟ ಕಾನನಗಳು ಅಪಾರ ಪ್ರಮಾಣದಲ್ಲಿದೆ. ಬೇಸಿಗೆ ಕಾಲದಲ್ಲಿ ಕಿಡಿಗೇಡಿಗಳ ಕೃತ್ಯದಿಂದಾಗಿ ಜಿಲ್ಲೆಯ ಅರಣ್ಯ ಪ್ರದೇಶಗಳು, ವನ್ಯಜೀವಿ ಸಂಪತ್ತು ಬೆಂಕಿಗೆ ಆಹುತಿಯಾಗುತ್ತಿದೆ. ಈ ಬಾರಿಯೂ ಜಿಲ್ಲೆಯ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ಅರಣ್ಯ, ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಅರಣ್ಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಬೇಸಿಗೆಯಲ್ಲಿ ಕಾಫಿನಾಡಿನಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿದ್ದು, ಎರಡು ದಿನಗಳ ಹಿಂದೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಗೆ ಹೊಂದಿಕೊಂಡಿರುವ ಚೆನ್ನಗೊಂಡನಹಳ್ಳಿ ಅರಣ್ಯದಲ್ಲಿ ಕಿಡಿಗೇಡಿಗಳ ಕೃತ್ಯದಿಂದಾಗಿ ನೂರಾರು ಎಕರೆ ಅರಣ್ಯಕ್ಕೆ ಬೆಂಕಿ ಬಿದ್ದಿದ್ದ ಪರಿಣಾಮ ಅಲಲ್ಲಿ ಶೋಲಾ ಕಾಡುಗಳು, ಹುಲ್ಲುಗಾವಲು ಔಷಧ ಗುಣವುಳ್ಳ ಸಸ್ಯರಾಶಿ ಬೆಂಕಿಯ ಕೆನ್ನಾಲಿಗೆ ಬೂದಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅರಣ್ಯದಲ್ಲಿ ಕಾಣಿಸಿಕೊಳ್ಳುವ ಬೆಂಕಿ, ಕಾಡ್ಗಿಚ್ಚು ನಿಯಂತ್ರಣಕ್ಕೆ ಜಿಲ್ಲಾದ್ಯಂತ 165 ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಗತ್ಯ ಇರುವ ಅರಣ್ಯ ವ್ಯಾಪ್ತಿಯಲ್ಲಿ ವಾಚ್ ಟವರ್ ಹಾಗೂ ಸಿಬ್ಬಂದಿ ನೇಮಿಸಲಾಗಿದೆ. ಡ್ರೋಣ್ ಕ್ಯಾಮರ ಬಳಸಿ ಬೆಂಕಿ ಪತ್ತೆಗೆ ಇಲಾಖೆ ಮುಂದಾಗಿದೆ.
ಅರಣ್ಯದಂಚಿನಲ್ಲಿ ಬೆಂಕಿ ಬಿದ್ದರೇ ತಡೆಗಟ್ಟಲು ಅನುಕೂಲವಾಗುವಂತೆ ದೊಡ್ಡ ಬ್ಲಾಕ್‍ಗಳಲ್ಲಿ ಚಿಕ್ಕ ಚಿಕ್ಕ ಫೈರ್‍ಲೈನ್‍ಗಳನ್ನೂ ನಿರ್ಮಾಣ ಮಾಡಿ, ಇಂತಹ ಅರಣ್ಯ ವ್ಯಾಪ್ತಿಯಲ್ಲಿ ವಾಚ್ ಮ್ಯಾನ್ ಗಳನ್ನು ನೇಮಕ ಮಾಡಲಾಗಿದೆ. ಇಬರು ವಾಚ್ ಟವರ್ ಗಳಲ್ಲಿ ಕುಳಿತು ಎಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ ತಕ್ಷಣ ಬೆಂಕಿ ನಿಯಂತ್ರಣಕ್ಕೆ ಕ್ರಮವಹಿಸಲು ಬೇಕಾದ ಸಿದ್ಧತೆ ಕೈಗೊಳ್ಳಲಾಗಿದೆ.
ಇನ್ನು ಯಾವ ಸ್ಥಳದಲ್ಲಿ ಬೆಂಕಿ ಬಿದ್ದಿದೆ ಎನ್ನುವುದನ್ನು ಪತ್ತೆಹಚ್ಚುವ ಸಲುವಾಗಿ ಡ್ರೋನ್ ಕ್ಯಾಮರ ಬಳಕೆ ಮಾಡಲಾಗುತ್ತಿದೆ. ಜಿಲ್ಲೆಯ ಕಾಮೇನಹಳ್ಳಿಯಲ್ಲಿ ಬೆಂಕಿ ಬಿದ್ದಿದ್ದ ವೇಳೆ ಡ್ರೋಣ್ ಕ್ಯಾಮರ ಬಳಸಿ ಕೂಡಲೇ ಬೆಂಕಿಯನ್ನು ನಂದಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಿದ್ದು, ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಬಿಸಿಲಿನ ಝಳ ಹೆಚ್ಚಾಗುವ ಸಾಧ್ಯತೆಗಳಿದೆ. ಈ ವೇಳೆ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಹೆಚ್ಚು ಕಾಣಿಸಿಕೊಳ್ಳಲಿದ್ದು, ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಜ್ಜಾಗಿ ನಿಂತಿದೆ.
ಬೇಸಿಗೆ ಸಮೀಪಿಸುತ್ತಿದ್ದು, ಕಾಡಿಗೆ ಬೆಂಕಿಬೀಳದಂತೆ ತಡೆಯಲು 165 ಮಂದಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅಗತ್ಯ ಇರುವ ಅರಣ್ಯ ಪ್ರದೇಶಗಳಲ್ಲಿ ವಾಚ್‍ಟವರ್ ಗಳನ್ನು ನಿರ್ಮಿಸಿ ಅರಣ್ಯ ಇಲಾಖೆ ಸಿಬ್ಬಂದಿ ಈ ಟವರ್ ಗಳ ಮೂಲಕ ನಿಗಾವಹಿಸುತ್ತಿದ್ದಾರೆ. ಎತ್ತರದ ವಾಚ್ ಟವರ್ ಮೇಲೆ ನಿಂತು ಎಲ್ಲೆಡೆ ಕಣ್ಣಾಡಿಸದರೇ ಬೆಂಕಿ ಬಿದ್ದಿರುವುದು ತಿಳಿದು ಬರುತ್ತದೆ. ಇದರಿಂದ ಶೀಘ್ರ ಬೆಂಕಿ ನಂದಿಸಲು ಸಹಾಯವಾಗುತ್ತದೆ. ದಟ್ಟ ಕಾಡು, ಅರಣ್ಯಗಳಲ್ಲಿ ಡೋಣ್ ಕ್ಯಾಮರ ಬಳಸಿ ಬೆಂಕಿ ಪತ್ತೆ ಮಾಡಲಾಗುತ್ತಿದೆ. ಹಿಂದೆ ಬೆಂಕಿ ಕಾಣಿಸಿಕೊಂಡ ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಿಸಿ ಅರಣ್ಯಕ್ಕೆ ಬೆಂಕಿ ಹರಡದಂತೆ ಕ್ರಮವಹಿಸಲಾಗಿದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ಅರಣ್ಯದಂಚಿನ ಜನರಲ್ಲಿ ಈ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ.
ರಮೇಶ್‍ಬಾಬು, ಡಿಎಫ್‍ಒ, ಚಿಕ್ಕಮಗಳೂರು