ಚಿಕ್ಕಮಗಳೂರು: ಯುವಕನಿಗೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು
Update: 2024-02-04 06:02 GMT
ಚಿಕ್ಕಮಗಳೂರು: ಹೊಟೇಲ್ ನಲ್ಲಿ ಕೆಲಸ ಮಾಡಿದ್ದ ಬಾಕಿ ಸಂಬಳ ಕೇಳಿದ ಕೆಲಸದವನಿಗೆ ಯುವಕರ ಗುಂಪೊಂದು ಮದ್ಯ ಕುಡಿಸಿ, ಕೈ ಕಾಲು ಕಟ್ಟಿ, ಆತನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಕೊಪ್ಪ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಗಾಯಾಳು ಯುವಕನನ್ನು ಸತೀಶ್ ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ಸತೀಶ್ ಮೈ ಮೇಲೆ ರಕ್ತ ಸಿಕ್ತ ಗಾಯಗಳಾಗಿದ್ದು ಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಮಹೇಶ್, ವಿಠಲ, ಸಿರಿಲ್, ಮಂಜು, ಸುನಿಲ್ ಕಟ್ಟೆಹಕ್ಲು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.