ಸಿ.ಟಿ.ರವಿಯಿಂದ ಸಭಾಪತಿ, ಗೃಹಸಚಿವರಿಗೆ ದೂರು ಸಲ್ಲಿಕೆ
ಚಿಕ್ಕಮಗಳೂರು : ಸದನದಲ್ಲಿ ನಡೆದ ಘಟನೆ ಸಂಬಂಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಗೃಹಸಚಿವ ಜಿ.ಪರಮೇಶ್ವರ್ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ನಡೆಸಿಕೊಂಡಿರುವ ರೀತಿಯನ್ನು 7 ಪುಟಗಳ ವಿಸ್ತೃವಾದ ದೂರು ಸಲ್ಲಿಕೆ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪರಿಷತ್ ಸದಸ್ಯ ಬೋಸರಾಜ್ ಸೇರಿದಂತೆ ಹಲವರಿಂದ ಅವ್ಯಾಚ್ಚ ಶಬ್ದಬಳಕೆ, ಜೀವ ಬೆದರಿಕೆ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಸಭಾಪತಿಗಳಿಗೆ ದೂರು ಸಲ್ಲಿಸಿರುವುದರಲ್ಲಿ ಪೊಲೀಸರಿಂದ ನನ್ನ ಹಕ್ಕು ಚ್ಯುತಿಯಾಗಿದೆ. ಜೀವ ಬೆದರಿಕೆ, ಮಾನಹಾನಿಯಾಗಿದೆ. ಸಚಿವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆದಿದೆ ಎಂದು ದೂರಿನಲ್ಲಿ ವಿಸ್ತೃತವಾಗಿ ತಿಳಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದೇನೆಂಬ ಪ್ರಕರಣದ ಬಗ್ಗೆ ರಾಜ್ಯ ಸರಕಾರ ಸಿಐಡಿ ತನಿಖೆ ಮಾಡುವುದಾದರೇ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಮತ್ತು ಅವರ ನಿರ್ದೇಶನದಲ್ಲಿ ನಡೆಯಲಿ. ರಾಜ್ಯ ಸರಕಾರ ಯಾವುದೇ ಒತ್ತಡವನ್ನು ಹೇರದೆ ತನಿಖೆ ಮಾಡುವುದಾದರೇ ಕಾನ್ಸ್ ಟೇಬಲ್ ಕೂಡ ತನಿಖೆ ಮಾಡಬಹುದು ಎಂದರು.