ಕಳಸ| ಸರಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಸಿಪಿಐ ಮುಖಂಡರಿಂದ ಧರಣಿ: ಖಾಯಂ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಆಗ್ರಹ

Update: 2024-01-18 17:14 GMT

ಚಿಕ್ಕಮಗಳೂರು: ವೈದ್ಯರು, ಸಿಬ್ಬಂದಿ ಕೊರತೆ ಹಾಗೂ 108 ವಾಹನದ ಸಮರ್ಪಕ ಸೇವೆಗೆ ಆಗ್ರಹಿಸಿ ಜಿಲ್ಲೆಯ ಕಳಸ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಎದುರು ಸಿಪಿಐ ಪಕ್ಷದ ಮುಖಂಡರು ಹಾಗೂ ನಾಗರಿಕರು ಗುರುವಾರ ದಿಢೀರ್ ಧರಣಿ ನಡೆಸಿ, ಆಸ್ಪತ್ರೆ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ವಹಿಸಿರುವ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಮೂರ್ಚೆ ರೋಗದಿಂದ ನರಳುತ್ತಿದ್ದರಿಂದ ಸಾರ್ವಜನಿಕರು ಆತನನ್ನು ಪಟ್ಟಣದ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಸ್ಪತ್ರೆ ವೈದ್ಯರಾಗಿ ನಿಯೋಜನೆಗೊಂಡಿದ್ದ ವೈದ್ಯರು ಬೇರೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದನ್ನು ತಿಳಿದು ನಾಗರಿಕರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸುದ್ದಿ ತಿಳಿದ ಸಿಪಿಐ ಪಕ್ಷದ ಕಳಸ ತಾಲೂಕು ಮುಖಂಡರಾದ ಲಕ್ಷ್ಮಣ್ ಆಚಾರ್, ಗೋಪಾಲ್ ಶೆಟ್ಟಿ, ರಮೇಶ್ ಕೆಳಗೂರು ಹಾಗೂ ಸಾರ್ವಜನಿಕರು ಆಸ್ಪತ್ರೆ ಎದುರು ಜಮಾಯಿಸಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಖಂಡಿಸಿ ಆಸ್ಪತ್ರೆ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಸಿಪಿಐ ಮುಖಂಡ ಲಕ್ಷ್ಮಣ್ ಆಚಾರ್, ಕಳಸ ತಾಲೂಕು ವ್ಯಾಪ್ತಿಯಲ್ಲಿ ಶೇ.70ರಷ್ಟು ಮಂದಿ ಕಾರ್ಮಿಕ ವರ್ಗದವರು ವಾಸವಾಗಿದ್ದಾರೆ. ಪ್ರತೀ ವರ್ಷ ಈ ಭಾಗದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಹೊರ ರಾಜ್ಯಗಳ ಕಾರ್ಮಿಕರೂ ಆಗಮಿಸುತ್ತಿದ್ದಾರೆ. ಕಾರ್ಮಿಕರು ಹಾಗೂ ಎಸ್ಸಿ, ಎಸ್ಟಿ ಜನರ ಆರೋಗ್ಯ ಸೇವೆಗಾಗಿ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂದು ಅನೇಕ ವರ್ಷಗಳಿಂದ ಸಾರ್ವಜನಿಕರು ಹೋರಾಟ ನಡೆಸಿದ್ದರ ಫಲವಾಗಿ 2008ರಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದೆ. ಪಟ್ಟಣಕ್ಕೆ ಸುಸಜ್ಜಿತ ಆಸ್ಪತ್ರೆ ಬಂದಿದೆಯಾದರೂ ಆಸ್ಪತ್ರೆಗೆ ಬೇಕಾದ ಖಾಯಂ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದುವರೆಗೂ ಕ್ರಮವಹಿಸದ ಪರಿಣಾಮ ಇಲ್ಲಿನ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಎಂಬುದು ಮರಿಚೀಕೆಯಾಗಿದೆ. ಪರಿಣಾಮ ಬಡ ಜನರು ಹೆಚ್ಚು ಹಣ ಖರ್ಚು ಮಾಡಿ ದೂರದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗಬೇಕಾಗಿದೆ ಎಂದು ಆರೋಪಿಸಿದರು.

ಕಳಸ ಪಟ್ಟಣದಲ್ಲಿ ಉತ್ತಮವಾದ ಆಸ್ಪತ್ರೆ ಕಟ್ಟಡ ಇದೆಯಾದರೂ ಈ ಆಸ್ಪತ್ರೆಯಲ್ಲಿ ಬಡಜನರಿಗೆ ಆರೋಗ್ಯ ಸೇವೆ ಮರಿಚೀಕೆಯಾಗಿದೆ. ಖಾಯಂ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಕಾರ್ಮಿಕ ವರ್ಗದ ಜನರು ಸಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ 108 ಆಂಬುಲೆನ್ಸ್ ಕೆಟ್ಟು ಹಲವು ವರ್ಷಗಳಾದರೂ ದುರಸ್ತಿಗೆ ಕ್ರಮವಹಿಸಿಲ್ಲ. ಕ್ಷೇತ್ರ ಜನರ ಆರೋಗ್ಯದ ಬಗ್ಗೆ ಕ್ಷೇತ್ರದ ಶಾಸಕಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಾಳಜಿಯೇ ಇಲ್ಲ. ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ವಿಫಲವಾಗಿರುವ ಶಾಸಕಿ ಹಾಗೂ ಡಿಎಚ್‍ಒ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು.

- ರಮೇಶ್ ಕೆಳಗೂರು, ಸಿಪಿಐ ಮುಖಂಡ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News