ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಳ

Update: 2024-06-08 18:21 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶನಿವಾರ ಧಾರಾಕಾರ ಮಳೆಯಾಗಿದ್ದು, ಬಯಲು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದರೇ, ಮಲೆನಾಡು ಭಾಗದಲ್ಲಿ ಧಾರಾಕಾರ ಸುರಿಯಿತು. ನಗರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಉತ್ತಮ ಮಳೆಯಾಗಿದ್ದು, ಮಳೆಯಿಂದಾಗಿ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಶುಕ್ರವಾರದಿಂದ ಜಿಲ್ಲಾದ್ಯಂತ ಶೀತ ವಾತಾವರಣ ನಿರ್ಮಾಣವಾಗಿದ್ದು, ಶನಿವಾರ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಲೆನಾಡು ಭಾಗದ ತಾಲೂಕುಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ಭಾಗದಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬಯಲುಸೀಮೆ ಭಾಗವಾದ ಕಡೂರು, ಅಜ್ಜಂಪುರ ಹಾಗೂ ತರೀಕೆರೆ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಭಾರೀ ಮಳೆಯಿಂದಾಗಿ ಮಲೆನಾಡಿನ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹಲವಾರು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ. ಮೂಡಿಗೆರೆ ತಾಲೂಕು ವ್ಯಾಪ್ತಿಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿರುವುದರಿಂದ ವಾಹನ ಸವಾರರು, ಪ್ರವಾಸಿಗರು ಪರದಾಡುವಂತಾಗಿದೆ.

ಎರಡು ದಿನದ ಹಿಂದೆ ಚಿಕ್ಕಮಗಳುರು ನಗರ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದ ನಗರದ ಗೃಹ ಮಂಡಳಿ ಬಡಾವಣೆಯಲ್ಲಿನ ಶಿಕ್ಷಕರ ಲೇಔಟ್‍ಗೆ ಮಳೆನೀರು ನುಗ್ಗಿ ರಸ್ತೆಗಳು ಜಲಾವೃತಗೊಂಡಿತ್ತು. ಹರಿಹರದಹಳ್ಳಿಯಲ್ಲಿ ಮಳೆಯಿಂದ ಗದ್ದೆಗಳಲ್ಲಿ ನೀರು ನಿಂತು ಬೆಳೆಗಳಿಗೆ ಹಾನಿಯಾಗಿತ್ತು. ಶನಿವಾರ ನಗರದ ಶಿಕ್ಷಕರ ಬಡಾವಣೆಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಅಡಿಕೆ, ಕಾಫಿ, ಕಾಳುಮೆಣಸು ತೋಟಗಾರಿಕೆ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆ ಸೇರಿದಂತೆ ಇತರೆ ಧವಸಧಾನ್ಯಗಳ ಬಿತ್ತನೆ ಕಾರ್ಯವೂ ಚುರುಕುಗೊಂಡಿದೆ. ಒಟ್ಟಾರೆ ಜಿಲ್ಲಾದ್ಯಂತ ಕೆಲ ದಿನಗಳಿಂದ ಮಲೆ ಆರ್ಭಟಿಸುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜತೆಗೆ ಕೃಷಿ ಚಟುವಟಿಕೆ ಗರಿಗೆದರಿದೆ.

ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಭತ್ತದ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಭತ್ತದ ಕೃಷಿಕರು ಗದ್ದೆಗಳಲ್ಲಿ ಕೃಷಿ ಕೆಲಸ ಆರಂಭಿಸಿದ್ದಾರೆ. ಗದ್ದೆಗಳ ನಾಟಿಕಾರ್ಯಕ್ಕೆ ಸಸಿಮಡಿಗಳನ್ನು ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ. ಬಯಲು ಭಾಗದಲ್ಲೂ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದ್ದು, ಬಯಲು ಭಾಗದಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಇನ್ನು ಭಾರೀ ಮಳೆಯಿಂದಾಗಿ ಮಲೆನಾಡಿನ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ತರೀಕೆರೆಯ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಮ್‍ನಲ್ಲಿ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ.

ಮಳೆವಿವರ: ಕೊಪ್ಪತಾಲೂಕಿನ ಹರಿಹರಪುರದಲ್ಲಿ ಗರಿಷ್ಠ 45 ಮಿಲಿಮೀಟರ್ ಮಳೆಯಾದರೆ ತರೀಕೆರೆ ತಾಲೂಕಿನ ರಂಗೇನಹಳ್ಳಿ ಯಲ್ಲಿ ಕನಿಷ್ಟ 0.2 ಮಿ.ಮೀ. ಕನಿಷ್ಠ ಮಳೆಬಿದ್ದಿದೆ. ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ನಗರದಲ್ಲಿ 1.2, ವಸ್ತಾರೆ 2.4, ಜೋಳದಾಳ್ 13, ಆಲ್ದೂರು 5.7, ಅತ್ತಿಗುಂಡಿ 2, ಮೂಡಿಗೆರೆ 6.2, ಕೊಟ್ಟಿಗೆಹಾರೆ 46.2, ಗೋಣಿಬೀಡು 13.3, ಜಾವಳಿ27.4,ಕಳಸ 7.4, ಹಿರೇಬೈಲು 24, ಹೊಸಕೆರೆ 22,ಬಿಳ್ಳೂರು 20.2, ಶೃಂಗೇರಿ 56, ಕಿಗ್ಗ 7, ಕೊಪ್ಪ 4.2, ಜಯಪುರ 4.6 ಬಸರಿಕಟ್ಟೆ 4.5, ಕಮ್ಮರಡಿಉ 11.8, ತರೀಕೆರೆ ತಾಲೂಕಿನ ಲಕ್ಕವಳ್ಳಿ 16, ತಣಿಗೆಬೈಲು 3.6, ತ್ಯಾಗದಬಾಗಿ 18,ಹುಣಸಘಟ್ಟ 19,ಬೀರೂರಿನಲ್ಲಿ 5 ಮಿ.ಮೀ. ಮಳೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News