ತರೀಕೆರೆ: ಸಾಲ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಮಹಿಳೆ; ವ್ಯಕ್ತಿ ಮೃತ್ಯು

Update: 2024-01-14 04:57 GMT

ಸಾಂದರ್ಭಿಕ ಚಿತ್ರ 

ಚಿಕ್ಕಮಗಳೂರು: ನೀಡಿದ ಸಾಲವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಮಹಿಳೆಯೊಬ್ಬರು ವ್ಯಕ್ತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದು, ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದ ಕೆ.ಜಿ.ನವೀನ್ ಮೃತಪಟ್ಟವರು.

ಮಹಿಳೆಯಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದ ನವೀನ್‍ರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನವೀನ್ ಶನಿವಾರ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಕುಚ್ಚಿ ತಾಂಡ್ಯದ ಜ್ಯೋತಿಬಾಯಿ ಮತ್ತು ನಾಗ್ಯನಾಯ್ಕ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಕರಕುಚ್ಚಿ ಗ್ರಾಮದ ಕೆ.ಜಿ.ನವೀನ್ ಮತ್ತು ಜ್ಯೋತಿಬಾಯಿ ಸಂಬಂಧಿಕರಾಗಿದ್ದು, ಕಳೆದ ಐದು ವರ್ಷಗಳ ಹಿಂದೆ ಜ್ಯೋತಿಬಾಯಿ ತನ್ನ ಸಂಬಂಧಿ ಕೆ.ಜಿ.ನವೀನ್ ಹತ್ತಿರ ಮನೆಕಟ್ಟಲು 5ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಾಲ ಮರು ಪಾವತಿ ವಿಚಾರದಲ್ಲಿ ವಿವಾದ ಏರ್ಪಟ್ಟಿತ್ತು.

ಜ.2ರಂದು ಗ್ರಾಮದ ನಾಗ್ಯನಾಯ್ಕ ಎಂಬಾತ ಜ್ಯೋತಿಬಾಯಿ ಸಾಲದ ಹಣವನ್ನು ಹಿಂದಿರುಗಿಸಲಿದ್ದಾರೆ ಎಂದು ನವೀನ್‍ನನ್ನು ಜ್ಯೋತಿಬಾಯಿ ಮನೆಗೆ ಕರೆ ತಂದಿದ್ದಾನೆ. ಅಲ್ಲಿ ನವೀನ್ ಮೇಲೆ ಮಾರಕಾಸ್ತ್ರದಿಂದ ಜ್ಯೋತಿ ಬಾಯಿ ಹಲ್ಲೆ ನಡೆಸಿದ್ದು,  ತೀವ್ರವಾಗಿ ಗಾಯಗೊಂಡ ನವೀನ್ ಕೂಗಾಡುತ್ತಾ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಕೂಡಲೇ ಗ್ರಾಮಸ್ಥರು ನವೀನ್‍ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಕಳೆದ ಮೂರು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವೀನ್ ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ನವೀನ್ ಕುಟುಂಬಸ್ಥರು ಅವರ ಆಸೆಯಂತೆ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅಂಗಾಂಗ ದಾನದ ಬಳಿಕ ನವೀನ್ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಘಟನೆ ಸಂಬಂದ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಜ್ಯೋತಿಬಾಯಿ ಹಾಗೂ ನಾಗ್ಯಾನಾಯ್ಕ್‍ನನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News