ಸಂವಿಧಾನ ಜಾಗೃತಿ ಜಾಥಾ ಉದ್ದೇಶವನ್ನು ಜನರಿಗೆ ತಲುಪಿಸಲು ಅಧಿಕಾರಿಗಳ ನಿರ್ಲಕ್ಷ್ಯ; ಆರೋಪ
ಚಿಕ್ಕಮಗಳೂರು: ರಾಜ್ಯ ಸರಕಾರ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜ.26ರಿಂದ ರಾಜ್ಯದ ಪ್ರತೀ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಅದರಂತೆ ಜಿಲ್ಲೆಯಲ್ಲೂ ಜಾಗೃತಿ ಜಾಥಾ ಹಳ್ಳಹಳ್ಳಿಗಳಲ್ಲಿ ಸಂಚರಿಸುತ್ತಿದೆ. ಆದರೆ ಈ ಜಾಥಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಟಾಚಾರಕ್ಕೆ ನಡೆಯುತ್ತಿದೆ ಎಂದು ಆರೋಪಿಸಿ ರವಿವಾರ ಅಲ್ಲಂಪುರ ಗ್ರಾಮದಲ್ಲಿ ವಕೀಲ ಅನಿಲ್‍ಕುಮಾರ್ ನೇತೃತ್ವದಲ್ಲಿ ಗ್ರಾಮಸ್ಥರು ಜಾಗೃತಿ ಜಾಥಾದ ರಥ ತಡೆದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ರವಿವಾರ ಮಧ್ಯಾಹ್ನದ ವೇಳೆ ನಗರ ಸಮೀಪದ ಅಲ್ಲಂಪುರ ಗ್ರಾಮಕ್ಕೆ ಸಂವಿಧಾನ ಜಾಗೃತಿ ರಥ ಆಗಮಿಸಿದ್ದು, ಈ ವೇಳೆ ಜಾಥಾದಲ್ಲಿ ಬೆರಳೆಣಿಕೆಯ ಅಧಿಕಾರಿಗಳನ್ನು ಹೊರತು ಪಡಿಸಿ, ಗ್ರಾಪಂ ಅಧಿಕಾರಿಗಳು, ಸಾರ್ವಜನಿಕರು, ಶಾಲಾ ಮಕ್ಕಳು ಸೇರಿದಂತೆ ಯಾರೊಬ್ಬರೂ ಇಲ್ಲದ್ದನ್ನು ಕಂಡ ವಕೀಲ ಅನಿಲ್‍ಕುಮಾರ್ ಹಾಗೂ ಗ್ರಾಮಸ್ಥರು, ಸಂವಿಧಾನ ಜಾಗೃತಿ ಜಾಥಾದ ರಥವನ್ನು ತಡೆದು ಸ್ಥಳದಲ್ಲಿದ್ದ ನೋಡಲ್ ಅಧಿಕಾರಿಗಳಾದ ಭಾಗೀರಥಿ ಹಾಗೂ ಅಭಿಷೇಕ್ ಎಂಬವರನ್ನು ತರಾಟೆಗೆ ಪಡೆದರು. ಈ ಸ್ಥಳದಲ್ಲಿದ್ದ ಅಲ್ಲಂಪುರ ಗ್ರಾಪಂ ಕಾರ್ಯದರ್ಶಿಯನ್ನು ಪ್ರಶ್ನಿಸಿದ ಅವರು, ಜಾಥಾ ಗ್ರಾಮಕ್ಕೆ ಬರುವ ಮಾಹಿತಿ ಇರಲಿಲ್ಲವೇ?, ಜಾಥಾ ಗ್ರಾಮಕ್ಕೆ ಬರುತ್ತಿರುವ ಬಗ್ಗೆ ಗ್ರಾಮಸ್ಥರಿಗೆ ಏಕೆ ಮಾಹಿತಿ ನೀಡಿಲ್ಲ?, ಗ್ರಾಪಂ ಪಿಡಿಒ, ಸದಸ್ಯರು ಏಕೆ ಜಾಥಾದಲ್ಲಿ ಭಾಗವಹಿಲ್ಲ?, ಶಾಲಾ ಮಕ್ಕಳಿಗೆ ಏಕೆ ಮಾಹಿತಿ ನೀಡಿಲ್ಲ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೋಡಲ್ ಅಧಿಕಾರಿ ಭಾಗೀರಥಿ ಮಾತನಾಡಿ, ಜಿಲ್ಲೆಯಲ್ಲಿ ಜಾಥಾ ಸಂಚಾರ ಮಾಡುವ ಕುರಿತು ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಎಲ್ಲ ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಅಲ್ಲಂಪುರ ಗ್ರಾಪಂ ಅಧಿಕಾರಿಗಳಿಗೂ ಮಾಹಿತಿ ಹೋಗಿದೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಸಮಜಾಯಿಸಿ ನೀಡಿದರು.
ಈ ವೇಳೆ ಮಾತನಾಡಿದ ವಕೀಲ ಅನಿಲ್‍ಕುಮಾರ್, ರಾಜ್ಯ ಸರಕಾರ ಸಂವಿಧಾನದ ಮಹತ್ವವನ್ನು ರಾಜ್ಯದ ಪ್ರತೀ ನಾಗರಿಕನಿಗೂ ತಿಳಿಸುವ ಉದ್ದೇಶದಿಂದ ಪ್ರತೀ ಜಿಲ್ಲೆಗೆ 25 ಲಕ್ಷ ರೂ. ಹಣ ಮಂಜೂರು ಮಾಡಿದೆ. ಈ ಹಣ ಬಳಸಿಕೊಂಡು ಸಂವಿಧಾನದ ಮಹತ್ವವನ್ನು ಸಾರಬೇಕೆಂದು ಆದೇಶ ಹೊರಡಿಸಿದೆ. ಈ ಸಂಬಂಧ ಜಿಲ್ಲಾಡಳಿತ ಹಲವು ಬಾರಿ ಪೂರ್ವಭಾವಿ ಸಭೆಗಳನ್ನು ನಡೆಸಿ, ಸಂವಿಧಾನ ಜಾಗೃತಿ ರಥ ಸಂಚರಿಸುವ ಮಾರ್ಗ, ಗ್ರಾಮಗಳು, ಕೈಗೊಳ್ಳಬೇಕಾದ ಕಾರ್ಯಕ್ರಮಗಳು, ಗ್ರಾಪಂ ವ್ಯಾಪ್ತಿಗೆ ಜಾಗೃತಿ ರಥ ಆಗಮಿಸಿದ ವೇಳೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ಸಂಪೂರ್ಣ ಮಾಹಿತಿಯನ್ನೂ ನೀಡಿದೆ. ಅಲ್ಲದೇ ಸಂವಿಧಾನ ಜಾಗೃತಿ ರಥ ಸಂಚರಿಸುವ ಗ್ರಾಮ ಪಂಚಾಂತ್ ಅಧಿಕಾರಿಗಳಿಗೂ ಮಾಹಿತಿಯನ್ನು ನೀಡಲಾಗಿದೆ. ಜ.26ರಂದು ಚಿಕ್ಕಮಗಳೂರು ನಗರದಲ್ಲಿ ಜಾಥಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದಾರೆ. ಸದ್ಯ ಈ ಜಾಥಾ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚಾರ ಮಾಡುತ್ತಿದ್ದು, ಜಾಥಾವನ್ನು ಕಟಾಚಾರಕ್ಕೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಜಾಗೃತಿ ಜಾಥಾ ಯಾವುದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ವೇಳೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ಸ್ಥಳದಲ್ಲಿರಬೇಕು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಶಾಲಾ ಮಕ್ಕಳು ಸಮ್ಮಖದಲ್ಲಿ ಜಾಥಾದ ಆಶಯಗಳನ್ನು ವಿವರಿಸಬೇಕು. ಸರಕಾರದ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂಬ ನಿಯಮವನ್ನು ಸರಕಾರ ರೂಪಿಸಿದೆ. ಆದರೆ ಸಂವಿಧಾನ ಜಾಗೃತಿ ಜಾಥಾದಲ್ಲಿ ಈ ನಿಯಮಗಳನ್ನು ಪಾಲಿಸುತ್ತಿಲ್ಲ. ಸರಕಾರದ ಉದ್ದೇಶ ಜನರಿಗೆ ತಲುಪುತ್ತಿಲ್ಲ. ಗ್ರಾಮಗಳಿಗೆ ಜಾಥಾ ತಲುಪಿದ ವೇಳೆ ರಥಕ್ಕೆ ಪೂಜೆ ಮಾಡಿ ಕಳುಹಿಸುತ್ತಾ ಕಟಾಚಾರದಿಂದ ಜಾಥಾ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.