ಚಿಕ್ಕಮಗಳೂರು | ಮಂಗನಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮವಹಿಸಲಾಗಿದೆ: ಜಿಲ್ಲಾಧಿಕಾರಿ ಮೀನಾ ನಾಗರಾಜ್

Update: 2024-02-14 17:45 GMT

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕು ಭಾಗದಲ್ಲಿ ಮಂಗನಕಾಯಿಲೆ (ಕೆಎಫ್‍ಡಿ) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೋಗ ತಪಾಸಣೆ, ಚಿಕಿತ್ಸೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದೇ ಮಂಗನ ಕಾಯಿಲೆ ಹೆಚ್ಚಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೊಪ್ಪ ತಾಲೂಕಿನ ಮೈಸೂರು ಪ್ಲಾಂಟೇಷನ್ ಮತ್ತು ಓಎಲ್‍ಜಿ ಕಾಫಿ ತೋಟಗಳ ಕಾರ್ಮಿಕರಲ್ಲಿ ಮಂಗನಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಮಳೆ ಕೊರತೆ ಆಗಿರುವುದು ಮತ್ತು ತಾಪಮಾನ ಹೆಚ್ಚಳವಾಗಿರುವುದು ಮಂಗನಕಾಯಿಲೆ ಉಲ್ಬಣಗೊಳ್ಳಲು ಕಾರಣವಾಗಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಒಂದು ಪ್ರಕರಣ ಶೃಂಗೇರಿ ತಾಲೂಕಿನಲ್ಲಿ, 17 ಪ್ರಕರಣ ಕೊಪ್ಪ ತಾಲೂಕಿನಲ್ಲಿ ವರದಿಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 19 ಪ್ರಕರಣಗಳು ದಾಖಲಾಗಿವೆ. ಸೋಂಕು ಕಾಣಿಸಿಕೊಂಡಿದ್ದ ಶೃಂಗೇರಿ ತಾಲೂಕಿನ 79 ವರ್ಷದ ಓರ್ವ ವೃದ್ಧ ಮೃತಪಟ್ಟಿದ್ದಾರೆ. 6 ಮಂದಿ ಗುಣಮುಖರಾಗಿದ್ದು, 12ಜನರಲ್ಲಿ ಕಾಯಿಲೆ ಸಕ್ರೀಯವಾಗಿದೆ. ಸೋಂಕಿತರಿಗೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜನವರಿ ತಿಂಗಳಿಂದ ಇಲ್ಲಿಯವರೆಗೂ ಮಲೆನಾಡು ಭಾಗದಲ್ಲಿ ಮೂರು ಮಂಗಗಳು ಮೃತಪಟ್ಟಿವೆ. ಮಂಗಗಳ ಕಳೆಬರಹದಲ್ಲಿನ ಉಣ್ಣೆಗಳನ್ನು ಸಂಗ್ರಹಿಸಿ ಪ್ರಾಯೋಗಾಲಯಕ್ಕೆ ಕಳಿಸಲಾಗಿದ್ದು, ಮಂಗಳಲ್ಲಿ ವೈರಾಣು ಇರುವುದು ದೃಢಪಟ್ಟಿಲ್ಲ. ಮಳೆ ಕಡಿಮೆ ಪ್ರಮಾಣದಲ್ಲಿ ಆಗಿರುವುದರಿಂದ ಮಂಗನಕಾಯಿಲೆ ಉಲ್ಬಣಗೊಳ್ಳಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಕಾಡಿಗೆ ತೆರಳುವ ಅಥವಾ ಕಾಫಿತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಣ್ಣೆಗಳು ಮೈಮೇಲೆ ಹತ್ತದಂತೆ ಡಿಇಪಿಎ ಔಷಧವನ್ನು ವಿತರಿಸಲಾಗಿದೆ. ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ 800ರಿಂದ 900 ಬಾಟಲ್ ಡಿಇಪಿಎ ದ್ರಾವಣವನ್ನು ವಿತರಣೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಂಗನಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‍ಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಭರತ್ ಉಪಸ್ಥಿತರಿದ್ದರು..

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News