ಚಿಕ್ಕಮಗಳೂರು | ಸೇನಾ ಪರೀಕ್ಷೆಯಲ್ಲಿ ಫೇಲ್ : ಮನನೊಂದ ಯುವಕ ಆತ್ಮಹತ್ಯೆ
ಚಿಕ್ಕಮಗಳೂರು: ಭಾರತೀಯ ಸೇನೆಯ ಪರೀಕ್ಷೆ ಬರೆದಿದ್ದ ಯುವಕನೋರ್ವ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣಕ್ಕೆ ಮನನೊಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ವರದಿಯಾಗಿದೆ.
ಕಿಗ್ಗಾ ಸಮೀಪದ ಯಡದಾಳು ಗ್ರಾಮದ ಕಾರ್ತಿಕ್(23) ಮೃತ ಯುವಕನಾಗಿದ್ದು, ಈತ ಕಳೆದ ಅನೇಕ ವರ್ಷಗಳಿಂದ ಸೇನೆ ಸೇರುವ ಉದ್ದೇಶದಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಅನೇಕ ಪರೀಕ್ಷೆಗಳನ್ನು ಬರೆದಿದ್ದ ಎನ್ನಲಾಗಿದೆ. ಇತ್ತೀಚೆಗಷ್ಟೇ ಸೇನೆಯ ಪರೀಕ್ಷೆಯೊಂದನ್ನು ಬರೆದು ತೇರ್ಗಡೆಯಾಗುವ ನಿರೀಕ್ಷೆ ಹೊಂದಿದ್ದ ಕಾರ್ತಿಕ್ ಫಲಿತಾಂಶ ಬಂದಾಗ ಅನುತ್ತೀರ್ಣನಾಗಿದ್ದ ಎಂದು ಹೇಳಲಾಗಿದೆ. ಇದರಿಂದ ಮನನೊಂದಿದ್ದ ಆತ ಮನೆಯವರ ಬಳಿ ಅನುತ್ತೀರ್ಣನಾಗಿರುವುದನ್ನು ಹೇಳಲಾಗದೇ ಮಾನಸಿಕವಾಗಿ ನೊಂದಿದ್ದ ಎಂದು ತಿಳಿದು ಬಂದಿದೆ.
ಕಳೆದ ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್‍ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇನೆಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ, ಇದನ್ನು ಮನೆಯವರ ಬಳಿ ಹೇಳುವ ಧೈರ್ಯ ನನಗಿಲ್ಲ. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾನೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.