ನ.9ರಿಂದ 11ರವರೆಗೆ ಮುಳ್ಳಯ್ಯನಗಿರಿ ಪ್ರವಾಸಿ ತಾಣಗಳಿಗೆ ನಿರ್ಬಂಧ

Update: 2024-11-05 17:11 GMT

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶ್ರೀರಾಮಸೇನೆ ಸಂಘಟನೆ ವತಿಯಿಂದ ನ.4ರಿಂದ 10ರವರೆಗೆ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ನ.10ರಂದು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಾಹನಗಳ ಮುಖಾಂತರ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಗೆ ಆಗಮಿಸಲಿದ್ದಾರೆ.

ದರ್ಗಾಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು, ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಿಂದ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುವ ಸಂಭವವಿರುವುದರಿಂದ ನ.9ರ ಬೆಳಗ್ಗೆ 6ರಿಂದ ನ.11ರ ಬೆಳಗ್ಗೆ 6ರವರೆಗೆ ಯಾವುದೇ ಪ್ರವಾಸಿಗರು, ಯಾತ್ರಾರ್ಥಿಗಳು ಇಲ್ಲಿಗೆ ಬರುವುದು, ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಗೆ ದತ್ತಮಾಲಾಧಾರಿಗಳು ಶ್ರೀರಾಮಸೇನಾ ಮುಖಂಡರು, ಕಾರ್ಯಕರ್ತರು ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಬರುವ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವವರು ಮತ್ತು ಈಗಾಗಲೇ ಹೋಮ್ ಸ್ಟೇ, ರೆಸಾರ್ಟ್‍ಗಳನ್ನು ಬುಕ್ಕಿಂಗ್ ಮಾಡಿಕೊಂಡವರುಗಳನ್ನು ಹೊರತು ಪಡಿಸಿ ಇತರ ಯಾವುದೇ ಪ್ರವಾಸಿಗರು, ಯಾತ್ರಾರ್ಥಿಗಳು ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

ವಾಹನ ಸಂಚಾರ ನಿಷೇಧ:

ತಾಲೂಕು ವ್ಯಾಪ್ತಿಯ ರಾಜ್ಯ ಹೆದ್ದಾರಿ -257ರಲ್ಲಿನ ಅರಸೀಕೆರೆಯಿಂದ ಕೈಮರ ರಾಜ್ಯ ಹೆದ್ದಾರಿ-57ವರೆಗೆ ಸಂಪರ್ಕಿಸುವ ರಸ್ತೆಯಲ್ಲಿ ಕೈಮರದಿಂದ ಅತ್ತಿಗುಂಡಿ ಭಾಗದಲ್ಲಿ ಕವಿಕಲ್ ಗಂಡಿ ಅರಣ್ಯ ಚೆಕ್ ಪೋಸ್ಟ್ ಬಳಿಯಿಂದ ಸಿಎನ್‍ಆರ್ ಹೋಂಸ್ಟೇವರೆಗಿನ ಭಾಗದಲ್ಲಿ ಅತಿಯಾದ ಮಳೆಯಿಂದ ರಸ್ತೆಯ ಭಾಗ ಕುಸಿದಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ.

ಶಾಶ್ವತ ದುರಸ್ತಿ ಕಾರ್ಯದ ಕಾಮಗಾರಿಯು ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಈ ಬಾಧಿತ ಸ್ಥಳದಲ್ಲಿ ರಸ್ತೆಯ ಅಗಲ ಕಡಿಮೆ ಇರುವುದರಿಂದ ಒಂದು ಬಾರಿಗೆ ಕೇವಲ ಒಂದೇ ವಾಹನ ಸಂಚರಿಸಲು ಮಾತ್ರ ಅವಕಾಶವಿದೆ. ವಾಹನಗಳ ಸಂಚಾರವು ಅಪಾಯಕಾರಿಯಾಗಿರುವುದರಿಂದ ಶಾಶ್ವತ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಈ ಭಾಗದಲ್ಲಿ ಎಲ್ಲಾ ರೀತಿಯ ಎರಡು ಆಕ್ಷಲ್‍ಗಿಂತ ಹೆಚ್ಚಿನ ಆಕ್ಷಲ್‍ಗಳನ್ನು ಹೊಂದಿರುವ ಲಾರಿ ಮತ್ತು ಬಸ್‍ಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಮೀನಾ ನಾಗರಾಜ್ ಅವರು ಆದೇಶಿಸಿದ್ದಾರೆ.

ಈ ಭಾಗದಲ್ಲಿ ಶಾಶ್ವತ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಉದ್ದ ಜಾಸ್ತಿ ಇರುವ ವಾಹನಗಳು ಸಂಚರಿಸಲು ಅಸಾಧ್ಯವಾಗಿರುತ್ತದೆ ಹಾಗೂ ಅಪಾಯಕಾರಿಯಾಗಿರುತ್ತದೆ. ಅಲ್ಲದೇ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News