ಸಂಘಪರಿವಾರದ ಮುಖಂಡರು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ : ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಆರೋಪ

Update: 2025-01-16 23:17 IST
ಸಂಘಪರಿವಾರದ ಮುಖಂಡರು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ : ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಆರೋಪ
  • whatsapp icon

ಚಿಕ್ಕಮಗಳೂರು : ಸಂಘಪರಿವಾರದವರು ಶಾ ಖಾದ್ರಿ ಕುಟುಂಬಸ್ಥರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಗೊಂದಲ ಮೂಡಿಸುವುದನ್ನು ಕೂಡಲೇ ನಿಲ್ಲಿಸಬೇಕು. ತಾನು ಸೈಯದ್ ಬುಡಾನ್ ಶಾ ಖಾದ್ರಿ ವಂಶಸ್ಥ ಎನ್ನುವುದಕ್ಕೆ ನನ್ನ ಬಳಿ ದಾಖಲೆ ಇದೆ ಎಂದು ಸೈಯದ್ ಬುಡಾನ್ ಶಾ ಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.

ಈ ಸಂಬಂಧ ಗುರುವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಇತ್ತೀಚೆಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ವಿಎಚ್‌ಪಿ ಮುಖಂಡ ರಂಗನಾಥ್ ಎಂಬವರು ಶಾ ಖಾದ್ರಿ ವಂಶಸ್ಥರ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯವಾಗಿ ತಾನು ಶಾ ಖಾದ್ರಿ ವಂಶಸ್ಥನೇ ಅಲ್ಲ, ಬಾಬಾಬುಡಾನ್ ಗಿರಿ ದರ್ಗಾದ ಆವರಣದಲ್ಲಿರುವ ಔದಂಬರ ವೃಕ್ಷದ ಬಳಿ ಇರುವ ಗೋರಿಗಳು ಶಾ ಖಾದ್ರಿ ವಂಶಸ್ಥರದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಾಬಾ ಬುಡಾನ್‌ಗಿರಿ ವಿಚಾರವನ್ನು ಸದಾ ವಿವಾದವಾಗಿರಿಸುವ ಉದ್ದೇಶದಿಂದಲೇ ಸಂಘಪರಿವಾರದವರು ಸುಳ್ಳಿನ ಸರಮಾಲೆಗಳನ್ನೇ ಪದೇ ಪದೇ ಹೇಳುತ್ತಾ ಬಂದಿದ್ದು, ಇಂದಿಗೂ ಅದನ್ನೇ ಮುಂದುವರಿಸಿದ್ದಾರೆ ಎಂದಿದ್ದಾರೆ.

ಮೈಸೂರು ಮಹಾರಾಜರು ಹಿಂದೆ ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದ ಉಸ್ತುವಾರಿಗೆ ಗೌಸ್ ಶಾ ಖಾದ್ರಿ ಎಂಬವರನ್ನು ಮ್ಯಾನೇಜರ್ ಆಗಿ ನೇಮಿಸಿದ್ದರೆಂದು ವಿಎಚ್‌ಪಿ ಮುಖಂಡ ರಂಗನಾಥ್ ಹೇಳಿದ್ದಾರೆ, ಶಾ ಖಾದ್ರಿ ಅವರನ್ನು ನೇಮಕ ಮಾಡುವುದು ಶಾ ಖಾದ್ರಿ ಕುಟುಂಬಸ್ಥರ ಆಂತರಿಕ ವಿಚಾರ ಎಂದು ಹಿಂದಿನ ಸರಕಾರಿ ದಾಖಲೆಗಳಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಈ ಸಂಬಂಧ ಸಂಘಪರಿವಾರದವರಿಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ದಾಖಲೆಗಳನ್ನು ನೀಡಲು ಸಿದ್ಧ ಎಂದಿದ್ದಾರೆ.

ಶಾ ಖಾದ್ರಿ ಕುಟುಂಬಸ್ಥರು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ವಿಎಚ್‌ಪಿ ಮುಖಂಡ ಹೇಳಿಕೆ ನೀಡಿದ್ದಾರೆ. ನಾನು ಶಾ ಖಾದ್ರಿ ಕುಟುಂಬಸ್ಥನಲ್ಲ ಎಂಬುದು ನಿಜವಾಗಿದ್ದರೇ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿರುವ ಶಾ ಖಾದ್ರಿ ಅವರಾದರೂ ನನ್ನನ್ನು ವಿರೋಧ ಮಾಡಬೇಕಿತ್ತು. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಶಾ ಖಾದ್ರಿ ಕೂಡ ನಮ್ಮ ವಂಶಸ್ಥರೇ ಆಗಿದ್ದಾರೆ ಎಂದು ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಪ್ರಕಟನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News