ಸರಕಾರ ಬಜೆಟ್‍ನಲ್ಲಿ ಘೋಷಿಸಿದ ಎಲ್ಲ ಯೋಜನೆಗಳ ಜಾರಿಗೆ ಕ್ರಮವಹಿಸಿದೆ: ಸಚಿವ ಕೆ.ಜೆ.ಜಾರ್ಜ್

Update: 2024-01-16 16:33 GMT

ಚಿಕ್ಕಮಗಳೂರು: ಕಳೆದ ಬಜೆಟ್‍ನಲ್ಲಿ ಮೀಸಲಿರಿಸಲಾಗಿದ್ದ ಅನುದಾನವನ್ನು ಕಡಿಮೆ ಮಾಡದೆ ಅಭಿವೃದ್ಧಿಗೆ ಪೂರಕವಾಗಿ ರಾಜ್ಯ ಸರಕಾರ ಜನಪರವಾಗಿ ಆಡಳಿತ ನೀಡುತ್ತಿದೆ. ಬಜೆಟ್‍ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳಿಗೂ ಅನುದಾನ ಸಿಗಲಿದೆ ಎಂದು ಇಂಧನ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ನಗರದ ಬೈಪಾಸ್ ರಸ್ತೆಯ ಕಲ್ಯಾಣ ನಗರದ ನೀಲಾಂಬಿಕ ರಸ್ತೆಯಲ್ಲಿ ನಗರೋತ್ತಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು 45 ಸಾವಿರ ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿದ್ದು, ಇದಕ್ಕೂ ಬಜೆಟ್‍ಗೂ ಯಾವುದೇ ಸಂಬಂಧ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬದ್ಧತೆಯಿಂದ ಸರಕಾರ ಕೆಲಸ ಮಾಡುತ್ತಿದ್ದು, ಸಂಕಷ್ಟದಲ್ಲಿದ್ದ ಬಡವರು, ಮಧ್ಯಮ ವರ್ಗದ ಜನರನ್ನು ಆರ್ಥಿಕವಾಗಿ ಮೇಲೆತ್ತಲು ಸರಕಾರ ಕ್ರಮವಹಿಸಿದೆ ಎಂದರು.

ಈಗಾಗಲೇ ಇಂಧನ ಇಲಾಖೆಯಿಂದ ಸುಮಾರು 1.65 ಕೋಟಿ ಜನರಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಹಿಂದೆ ಅರ್ಜಿ ಸಲ್ಲಿಸದವರಿಗೆ ಈಗಲೂ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಿಂದ ಹಣ ವರ್ಗಾವಣೆ ಮಾಡಲಾಗುತ್ತಿದೆ. ಅದೇ ರೀತಿ ಶಕ್ತಿ ಯೋಜನೆಯಿಂದ 60 ಲಕ್ಷ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ದೇವಾಲಯಗಳ ಹುಂಡಿಯಲ್ಲಿ ಹೆಚ್ಚು ಹಣ ಸಂಗ್ರಹವಾಗುತ್ತಿದೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆ ಜಾರಿಗೆ ಸರಕಾರ ಅಕ್ಕಿ ಕೊಡಲಿಲ್ಲ ಎಂದು ಆರೋಪಿಸಿದ ಅವರು, 5ಕೆ.ಜಿ ಅಕ್ಕಿ ಜೊತೆಗೆ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 170 ರೂ.ನಂತೆ ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ. ಯುವನಿಧಿ ಯೋಜನೆಯನ್ನು ಈಗಾಗಲೇ ಚಾಲನೆ ನೀಡಿದ್ದು, ಇದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ಅಡ್ಡಿ ಇಲ್ಲದೇ ಜಾರಿ ಮಾಡಲಾಗುತ್ತಿದೆ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಬಡಾವಣೆಯಲ್ಲಿನ ರಸ್ತೆ ಕಾಮಗಾರಿಯನ್ನು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ಜಿಲ್ಲಾಧಿಕಾರಿ ಮೀನಾ ನಾಗರಾಜ್. ಎಸ್ಪಿ ಡಾ.ವಿಕ್ರಮ ಅಮಟೆ, ಯೋಜನಾ ನಿರ್ದೇಶಕಿ ನಾಗರತ್ನ ಪೌರಾಯುಕ್ತ ಬಿ.ಸಿ.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಸೇರಿದಂತೆ ನಗರಸಭೆಯ ಸ್ಥಳೀಯ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News