ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಎನ್ನುವವರು ನಿಜವಾದ ಬಿಜೆಪಿ ಕಾರ್ಯಕರ್ತರಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2024-02-24 14:33 GMT

ಚಿಕ್ಕಮಗಳೂರು : ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಜವಾದ ಬಿಜೆಪಿ ಕಾರ್ಯಕರ್ತರು ಈ ರೀತಿಯ ಆರೋಪ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷವೇ ಆಗಲಿ, ವಿರೋಧ ಪಕ್ಷವೇ ಆಗಲಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಗೆ ಸಿದ್ದ. ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ. ಯಾರೋ ವಿರೋಧಿಗಳು ಈ ರೀತಿ ಮಾಡಿಸಿದ್ದಾರೆ.

ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ಈ ರೀತಿ ಮಾಡಿಸಿರಬಹುದು, ಅವರು ಹಿಂದಿದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದಾರೆ. ಇಲ್ಲೂ ನಡೆಸುತ್ತಿದ್ದಾರೆ. ನಾವು  ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ. ನಾವು ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ತಮ್ಮ ವಿರುದ್ದ ಜಿಲ್ಲೆಯಲ್ಲಿ ಆರಂಭವಾಗಿರುವ ʼಗೋಬ್ಯಾಕ್ ಶೋಭಾʼ ಅಭಿಯಾನಕ್ಕೆ ತಿರುಗೇಟು ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸವನ್ನೂ ಯಾರೂ ಮಾಡಬಾರದು. ನಾವು ನಮ್ಮ ವಿರುದ್ದ ನಿಲ್ಲುವ ಅಭ್ಯರ್ಥಿಯನ್ನು ಅಲ್ಲಗಳೆಯುವುದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಮತದಾರರ ಬಳಿ ತೆರಳಿ ಚುನಾವಣೆ ಎದುರಿಸುತ್ತೇವೆ ಎಂದರು.

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ. ನಾನು ಇದುವರೆಯೂ ಯಾವ ಗುತ್ತಿಗೆದಾರನಿಂದಲೂ ಒಂದು ರೂ. ಕೂಡ ಪಡೆದಿಲ್ಲ. ಅವರ ಮುಖವನ್ನು ಕೂಡ ನೋಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೇಂದ್ರದ ಮಂತ್ರಿಗಳೊಂದಿಗೆ ಜಗಳವಾಡಿ ಇಲ್ಲಿಗೆ ಅನುದಾನ ತಂದಿದ್ದೇನೆ. ಅಭಿಯಾನ, ಪತ್ರ ಚಳುವಳಿ ಯಾವುದು ಎಫೆಕ್ಟ್ ಆಗಲ್ಲ. ನಾನು ಮಂತ್ರಿಯಾಗಿ ಒಳ್ಳೇ ಕೆಲಸ ಮಾಡಿದ್ದೇನೆ. ಇದೇ ರೀತಿ ಹಿಂದಿನ ಚುನಾವಣೆಯಲ್ಲೂ ಮಾಡಿದ್ದರು. ಆಗಲೂ ಗೋ ಬ್ಯಾಕ್ ಎಂದಿದ್ದರು. ಆದರೆ ವರಿಷ್ಠರು ನನ್ನ ಕೆಲಸ ನೋಡಿ ಟಿಕೆಟ್ ನೀಡಿದ್ದರು. ಚುನಾವಣೆಯಲ್ಲಿ ಮತದಾರರು ನನ್ನ ಕೆಲಸ ನೋಡಿ ಗೆಲ್ಲಿಸಿದ್ದರು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News