'ಆದಿಪುರುಷ್' ಚಿತ್ರದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ: ಕ್ಷಮೆ ಕೋರಿದ ಸಂಭಾಷಣೆಕಾರ ಮನೋಜ್ ಮುಂತಶಿರ್
ಹೊಸದಿಲ್ಲಿ: ಜೂನ್‌ನಲ್ಲಿ ಬಿಡುಗಡೆಗೊಂಡ ನಂತರ ತೀವ್ರ ವಿವಾದಕ್ಕೆ ಗುರಿಯಾಗಿದ್ದ 'ಆದಿಪುರುಷ್' ಚಲನಚಿತ್ರದ ಸಂಭಾಷಣೆಕಾರ ಮನೋಜ್ ಮುಂತಶಿರ್ ಬೇಷರತ್ ಕ್ಷಮಾಪಣೆ ಕೋರಿದ್ದಾರೆ. ಸಾಮಾಜಿಕ ಮಾಧ್ಯಮದ ಟಿಪ್ಪಣಿಯೊಂದರಲ್ಲಿ, 'ಆದಿಪುರುಷ್' ಚಲನಚಿತ್ರವು ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದನ್ನು ನಾನು ಒಪ್ಪುತ್ತೇನೆ. ನಾನು ಕ್ಷಮೆ ಕೋರುತ್ತೇನೆ. ನಮ್ಮೆಲ್ಲರನ್ನೂ ಒಗ್ಗಟ್ಟಾಗಿರಿಸಲಿ ಹಾಗೂ ನಮ್ಮ ಪವಿತ್ರ ಸನಾತನ ಸಂಸ್ಕೃತಿ ಹಾಗೂ ಅದ್ಭುತ ದೇಶಕ್ಕೆ ಸೇವೆ ಒದಗಿಸುವ ಶಕ್ತಿಯನ್ನು ಪ್ರಭು ಬಜರಂಗ ಬಲಿ ಕರುಣಿಸಲಿ" ಎಂದು ಅವರು ಬರೆದುಕೊಂಡಿದ್ದಾರೆ.
ಓಂ ರಾವತ್ ನಿರ್ದೇಶಿಸಿದ್ದ 'ಆದಿಪುರುಷ್' ಚಲನಚಿತ್ರವು ಪುರಾಣ ಕಾವ್ಯ ರಾಮಾಯಣವನ್ನು ಆಧರಿಸಿದ್ದು, ಅದರಲ್ಲಿನ ಕೆಲವು ಸಂಭಾಷಣೆಗಳಿಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಿಗೇ ಚಿತ್ರತಂಡವು ಆ ಸಂಭಾಷಣೆಗಳನ್ನು ಹಿಂಪಡೆದಿತ್ತು. ಅಲ್ಲದೆ, ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ಸಂಭಾಷಣೆಕಾರನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟವು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರವನ್ನೂ ಬರೆದಿತ್ತು.