ಆಡಳಿತ ಪಕ್ಷ ತಮ್ಮದೇ ಸಂಸದರ ವಿರುದ್ಧವೇ ವರ್ತಿಸುತ್ತಿದೆಯೇ?: ʼಎಮರ್ಜೆನ್ಸಿʼ ಚಿತ್ರದ ಹಗ್ಗಜಗ್ಗಾಟದ ಕುರಿತು ಬಾಂಬೆ ಹೈಕೋರ್ಟ್ ಪ್ರಶ್ನೆ

Update: 2024-09-19 07:31 GMT

Photo: Instagram/Kanganaranaut

ಹೊಸದಿಲ್ಲಿ: ಕಂಗನಾ ರಣಾವತ್ ಅಭಿನಯದ ವಿವಾದಾತ್ಮಕ ಚಿತ್ರ ʼಎಮರ್ಜೆನ್ಸಿʼ ಚಿತ್ರದ ಬಿಡುಗಡೆಗೆ ಬಿಜೆಪಿಯಲ್ಲೇ ವಿರೋಧವಿದೆ ಎಂದು ಹೇಳಲಾಗಿದೆ. ಚಿತ್ರದಲ್ಲಿನ ʼಸಿಖ್ ವಿರೋಧಿʼ ಚಿತ್ರಣವು ಮುಂಬರುವ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂದು ಚಿತ್ರ ಬಿಡುಗಡೆಗೆ ವಿರೋಧಿಸಲಾಗಿದೆ.

ನ್ಯಾಯಮೂರ್ತಿಗಳಾದ ಬರ್ಗೆಸ್ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ಪೀಠವು ಚಲನಚಿತ್ರ ಬಿಡುಗಡೆಗೆ ಪ್ರಮಾಣಪತ್ರವನ್ನು ಕೋರಿ ಝೀ ಸ್ಟುಡಿಯೋಸ್ ಸಲ್ಲಿಸಿದ ಮನವಿಯ ವಿಚಾರಣೆ ನಡೆಸುತ್ತಿದೆ.

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಕೊಲಬಾವಾಲಾ ಅವರು ಸಿಬಿಎಫ್ಸಿ ವಕೀಲ ಅಭಿನವ್ ಚಂದ್ರಚೂಡ್ ಅವರನ್ನು ಚಿತ್ರದ ಸ್ಥಿತಿಯ ಬಗ್ಗೆ ಮೌಖಿಕವಾಗಿ ಕೇಳಿದ್ದಾರೆ. ಮತ್ತು ಈ ಕುರಿತು ಒಂದು ವಾರದೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೆನ್ಸಾರ್ ಮಂಡಳಿಗೆ ಸೂಚಿಸಿದ್ದಾರೆ.

ಚಿತ್ರದ ಸಹ ನಿರ್ಮಾಪಕರು ಬಿಜೆಪಿ ಸಂಸದರಾಗಿದ್ದಾರೆ ಮತ್ತು ಬಿಜೆಪಿ ಕೆಲವು ಸಮುದಾಯಗಳ ಭಾವನೆಗಳನ್ನು ನೋಯಿಸುವ ಚಲನಚಿತ್ರವನ್ನು ಬಯಸುವುದಿಲ್ಲ ಎಂದು ಕೋರ್ಟ್ ಗೆ ವಕೀಲರು ತಿಳಿಸಿದ್ದಾರೆ.

ಹಿರಿಯ ವಕೀಲ ವೆಂಕಟೇಶ್ ಧೋಂಡ್, ಪಕ್ಷವು ಅವರ ಒಟ್ಟಾರೆ ಹಿತಾಸಕ್ತಿಗಳನ್ನು ನೋಡುತ್ತಿದೆ ಮತ್ತು ಚಲನಚಿತ್ರವನ್ನು ಬಿಡುಗಡೆ ಮಾಡಲು ಬಯಸುವುದಿಲ್ಲ ಎಂದು ಕೋರ್ಟ್ ನಲ್ಲಿ ಪ್ರತಿಪಾದಿಸಿದ್ದಾರೆ.

ಕಂಗನಾ ರಣಾವತ್, ಅನುಪಮ್ ಖೇರ್ ಮತ್ತು ಶ್ರೇಯಸ್ ತಲ್ಪಾಡೆ ನಟಿಸಿರುವ ಈ ಚಲನಚಿತ್ರವು 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರವು ಹೇರಿದ ತುರ್ತು ಪರಿಸ್ಥಿತಿಯನ್ನು ಆಧರಿಸಿದೆ. ಚಿತ್ರದಲ್ಲಿ ಸಿಖ್ ಸಂಘಟನೆಗಳು ಮತ್ತು ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News