ʼಅನ್ನಪೂರ್ಣಿʼ ಸಿನಿಮಾದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ; ನಟಿ ನಯನತಾರಾ ವಿರುದ್ಧ ಎಫ್‌ಐಆರ್ ದಾಖಲು
ಹೊಸದಿಲ್ಲಿ: ನಯನತಾರಾ ಅವರ ಅಭಿನಯದ ʼಅನ್ನಪೂರ್ಣಿʼ ತಮಿಳು ಸಿನಿಮಾದಲ್ಲಿ ಶ್ರೀರಾಮ ದೇವರಿಗೆ ಅಗೌರವ ತೋರಲಾಗಿದೆ ಎಂಬ ಕುರಿತಂತೆ ವ್ಯಾಪಕ ಆಕ್ರೋಶದ ನಡುವೆ ನಟಿ, ಸಿನೆಮಾದ ನಿರ್ದೇಶಕರು, ನಿರ್ಮಾಪಕರು ಹಾಗೂ ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ಮೋನಿಕಾ ಶೇರ್ಗಿಲ್ ವಿರುದ್ಧ ಮಧ್ಯ ಪ್ರದೇಶದ ಜಬಲ್ಪುರ್‌ನಲ್ಲಿ ಬಲಪಂಥೀಯ ಸಂಘಟನೆಯೊಂದು ದಾಖಲಿಸಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ.
ಚಿತ್ರವು ʼಲವ್ ಜಿಹಾದ್ʼ ಪ್ರೋತ್ಸಾಹಿಸುತ್ತದೆ, ಶ್ರೀ ರಾಮ ದೇವರಿಗೆ ಅಗೌರವ ತೋರಿದೆ ಮತ್ತು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಓಮ್ತಿ ಠಾಣೆಯ್ಲಲಿ ಹಿಂದು ಸೇವಾ ಪರಿಷದ್ ಎಂಬ ಸಂಘಟನೆಯ ಅಧ್ಯಕ್ಷ ಅತುಲ್ ಜೇಸ್ವಾನಿ ದೂರು ದಾಖಲಿಸಿದ್ದಾರೆ. ನಯನತಾರಾ ಹಾಗೂ ಮೋನಿಕಾ ಶೇರ್ಗಿಲ್ ಹೊರತಾಗಿ ನಿರ್ದೇಶಕರಾದ ನೀಲೇಶ್ ಕೃಷ್ಣ ,ನಿರ್ಮಾಪಕರಾದ ಜತಿನ್ ಸೇಠಿ ಮತ್ತು ಆರ್ ರವೀಂದ್ರನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 1 ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಿನೆಮಾ ಡಿಸೆಂಬರ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಆದರೆ ವ್ಯಾಪಕ ವಿರೋಧದ ನಡುವೆ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಅದನ್ನು ವಾಪಸ್ ಪಡೆದುಕೊಳ್ಳಲಾಗಿದೆ.