‘ಜೈಲರ್’ ಚಿತ್ರದಲ್ಲಿ ಆರ್‌ಸಿಬಿ ಜೆರ್ಸಿಯನ್ನು ಬಳಸದಂತೆ ನಿರ್ಮಾಪಕರಿಗೆ ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ: ಸೆಪ್ಟೆಂಬರ್ 1 ರಿಂದ ಯಾವುದೇ ಥಿಯೇಟರ್‌ಗಳಲ್ಲಿ ಐಪಿಎಲ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೆರ್ಸಿಯನ್ನು ಪ್ರದರ್ಶಿಸಬಾರದು ಎಂದು ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ನಿರ್ಮಾಪಕರಿಗೆ ದಿಲ್ಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಚಿತ್ರದಲ್ಲಿ ಖಳ ನಟನೊಬ್ಬ ಆರ್‌ಸಿಬಿ ತಂಡದ ಜೆರ್ಸಿಯನ್ನು ಧರಿಸಿರುವುದನ್ನು ಚಿತ್ರಿಸಲಾಗಿದೆ ಎಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಚಲನಚಿತ್ರ ನಿರ್ಮಾಪಕರ ವಿರುದ್ಧ ಸಲ್ಲಿಸಿದ ಮೊಕದ್ದಮೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಟಿವಿ, ಸ್ಯಾಟಲೈಟ್ ಅಥವಾ ಯಾವುದೇ OTT ಪ್ಲಾಟ್‌ಫಾರ್ಮ್‌ನಲ್ಲಿ ಚಲನಚಿತ್ರದ ದೃಶ್ಯವನ್ನು ಬದಲಾಯಿಸಿ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದ್ದಾರೆ.
ಆರ್‌ಸಿಬಿ ತಂಡವು, ತನ್ನ ಜೆರ್ಸಿಯನ್ನು ಅವಹೇಳನಕಾರಿಯಾಗಿ ಬಳಸಿರುವ ದೃಶ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, RCB ಜರ್ಸಿಯನ್ನು ಧರಿಸಿರುವ ನಟ ಚಿತ್ರದಲ್ಲಿ ಮಹಿಳೆಯ ಬಗ್ಗೆ ಅವಹೇಳನಕಾರಿ ಮತ್ತು ಸ್ತ್ರೀದ್ವೇಷದ ಟೀಕೆಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದೆ.
ನಕಾರಾತ್ಮಕ ಸನ್ನಿವೇಶದಲ್ಲಿ ಜರ್ಸಿಯ ಅನಧಿಕೃತ ಬಳಕೆಯು ಅದರ ಬ್ರ್ಯಾಂಡ್ ಇಮೇಜ್ ಅನ್ನು ಹಾನಿಗೊಳಿಸುತ್ತದೆ ಹಾಗೂ ತನ್ನ ಬ್ರ್ಯಾಂಡ್ ಇಕ್ವಿಟಿಗೆ ಹಾನಿ ಮಾಡುತ್ತದೆ ಎಂದು RCB ವಾದಿಸಿದೆ.