ಮತ್ತೆ ನಾಲ್ಕು ಪ್ರಮುಖ ನಟರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ; ಮಲಯಾಳಂ ಚಿತ್ರರಂಗದಲ್ಲಿ ತಲ್ಲಣ

Update: 2024-08-26 08:00 GMT

ಎಂ.ಮುಕೇಶ್ (Photo: Facebook) 

ತಿರುವನಂತಪುರಂ: ಸೋಮವಾರ ಪ್ರಮುಖ ನಟರಾದ ಎಂ.ಮುಕೇಶ್ ಸೇರಿದಂತೆ ನಾಲ್ಕರು ನಟರ ವಿರುದ್ಧ ಮಲಯಾಳಂನ ನಟಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇದರಿಂದ, ಈಗಾಗಲೇ ನ್ಯಾ. ಕೆ.ಹೇಮಾ ಸಮಿತಿಯು ಬಯಲು ಮಾಡಿರುವ ಮಹಿಳಾ ವೃತ್ತಿಪರರ ಮೇಲಿನ ಲೈಂಗಿಕ ಕಿರುಕುಳದ ವರದಿಯಿಂದ ತಲ್ಲಣಗೊಂಡಿರುವ ಮಲಯಾಳಂ ಚಿತ್ರರಂಗ ಮತ್ತಷ್ಟು ಕ್ಷೋಭೆಗೀಡಾಗಿದೆ.

ಸಿಪಿಐ(ಎಂ) ಶಾಸಕರೂ ಆಗಿರುವ ನಟ ಎಂ.ಮುಕೇಶ್ ವಿರುದ್ಧ ಮಹಿಳಾ ನಟಿಯು ಟಿವಿ ಸಂದರ್ಶನವೊಂದರಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಬೆನ್ನಿಗೇ ಯುವ ಮೋರ್ಚಾ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೊಲ್ಲಂನಲ್ಲಿರುವ ಅವರ ನಿವಾಸದತ್ತ ಮೆರವಣಿಗೆ ನಡೆಸಿದರು. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಕುರಿತು ಕೊಲ್ಲಂ ಶಾಸಕರೂ ಆದ ಎಂ.ಮುಕೇಶ್ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇದಲ್ಲದೆ, ಮಲಯಾಳಂ ಚಿತ್ರರಂಗದ ಇನ್ನಿತರ ಮೂವರು ಗಣ್ಯ ನಟರ ವಿರುದ್ಧವೂ ಆ ನಟಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.

ಈ ನಡುವೆ, ಮಲಯಾಳಂ ಚಿತ್ರರಂಗದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಕುರಿತು ತನಿಖೆಯನ್ನು ನಡೆಸಬೇಕು ಎಂದು ನಟ ಮಣಿಯನ್ ಪಿಲ್ಲ ರಾಜು ಆಗ್ರಹಿಸಿದ್ದಾರೆ. ಈ ಕುರಿತು ತನಿಖೆ ನಡೆದರೆ ಮತ್ತಷ್ಟು ವಿಷಯಗಳು ಬಹಿರಂಗಗೊಳ್ಳಲಿವೆ ಹಾಗೂ ಅವುಗಳ ಹಿಂದಿರುವ ವಿವಿಧ ಹಿತಾಸಕ್ತಿಗಳು ಬಯಲಾಗಲಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News