'ಶೋಲೆ' ಚಿತ್ರವನ್ನು ಮೊದಲ ಬಾರಿ ನೋಡಿದಾಗ ಅದನ್ನು ದ್ವೇಷಿಸಿದ್ದೆ: ಕಮಲ್ ಹಾಸನ್

Update: 2023-07-21 14:25 GMT

Photo: ಕಮಲ್ ಹಾಸನ್, ಅಮಿತಾಭ್ ಬಚ್ಚನ್ | PTI 

ಹೊಸದಿಲ್ಲಿ: ಪ್ರಭಾಸ್ ನಾಯಕತ್ವದ ನೂತನ ಚಿತ್ರಕ್ಕೆ ಇಟ್ಟಿರುವ 'ಕಲ್ಕಿ 2898 ಎಡಿ ಅಟ್ ದ ಸ್ಯಾನ್ ಡೀಗೊ ಕಾಮಿಕ್ ಕಾನ್' ಶೀರ್ಷಿಕೆಯನ್ನು ಇಂದು (ಶುಕ್ರವಾರ) ಬೆಳಗ್ಗೆ ಅಧಿಕೃತವಾಗಿ ಬಹಿರಂಗಗೊಳಿಸಲಾಯಿತು. ಚಿತ್ರ ತಂಡವು ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ನಟ ಪ್ರಭಾಸ್, ಕಮಲ್ ಹಾಸನ್, ನಿರ್ದೇಶಕ ನಾಗ್ ಅಶ್ವಿನ್ ಹಾಗೂ ವಿಡಿಯೊ ಕರೆ ಮೂಲಕ ಅಮಿತಾಭ್ ಬಚ್ಚನ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮುಂಬರುವ 'ಪೌರಾಣಿಕ-ವೈಜ್ಞಾನಿಕ ಮಹಾಕಾವ್ಯ' ಚಿತ್ರದ ಕುರಿತು ಚಿತ್ರ ತಂಡವು ವಿವರಗಳನ್ನು ಹಂಚಿಕೊಂಡಿತು ಹಾಗೂ ಚಿತ್ರದ ಪ್ರಥಮ ಟೀಸರ್ ಅನ್ನೂ ಅನಾವರಣಗೊಳಿಸಿತು. ತಂಡದಲ್ಲಿ ರಾಣಾ ದಗ್ಗುಬಾಟಿ ಕೂಡಾ ಭಾಗಿಯಾಗಿದ್ದರು ಎಂದು indianexpress.com ವರದಿ ಮಾಡಿದೆ.

'ಭಾರತೀಯ ಚಿತ್ರರಂಗವನ್ನು ಯಾವ ಸಂಗತಿ ಶ್ರೇಷ್ಠವಾಗಿಸಿದೆ' ಎಂಬುದರ ಕುರಿತು ಮಾತನಾಡಿದ ಕಮಲ್ ಹಾಸನ್, "ನಮ್ಮ ಚಿತ್ರಗಳಿಗೆ ಪ್ರೇಕ್ಷಕರು ತರುವ ಶಕ್ತಿ" ಎಂದು ಶ್ಲಾಘಿಸಿದರು. "ನಾವು ಕತೆಗಳನ್ನು ಮಾಡುತ್ತೇವೆ, ಅವರು ತಾರೆಗಳನ್ನು ಸೃಷ್ಟಿಸುತ್ತಾರೆ" ಎಂದೂ ಪ್ರಶಂಸಿಸಿದರು. ಚಿತ್ರದ ಕುರಿತು ಮಾತನಾಡಿದ ಅವರು, "ಇದು ಹೃದಯದಲ್ಲಿನ್ನೂ ಭಾರತೀಯ ಚಿತ್ರವೇ ಆಗಿದೆ. ಇದು ಭಾರತೀಯ ಪುರಾಣ, ಸಂಸ್ಕೃತಿ, ದಕ್ಷಿಣ ಭಾರತೀಯನಾಗಿರುವುದು, ತೆಲುಗು ಭಾಷಿಕನಾಗಿರುವುದು, ಭಾರತೀಯನಾಗಿರುವುದು, ತಾರಾಸಮರದ ಅಭಿಮಾನಿಯಾಗಿರುವುದು - ಈ ಎಲ್ಲವೂ ಸೇರಿ ಈ ಚಿತ್ರ ರೂಪ ತಳೆದಿದೆ. ಇದು ವಿಭಿನ್ನ ಬಗೆಯ ಚಿತ್ರವಾಗಿದೆ" ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಕಮಲ್ ಹಾಸನ್ ಪ್ರಶಂಸಿಸಲು ತೊಡಗಿದಾಗ, ಅವರನ್ನು ಮಧ್ಯದಲ್ಲೇ ತಡೆದ ಅಮಿತಾಭ್ ಬಚ್ಚನ್, "ಇಷ್ಟು ಸಾಧಾರಣ ವ್ಯಕ್ತಿಯಾಗುವುದನ್ನು ನಿಲ್ಲಿಸಿ ಕಮಲ್, ನೀವು ನಮ್ಮೆಲ್ಲರಿಗಿಂತ ಹೆಚ್ಚು ಶ್ರೇಷ್ಠ ನಟ" ಎಂದು ಶ್ಲಾಘಿಸಿ, ಅಲ್ಲಿದ್ದವರನ್ನೆಲ್ಲ ನಗೆಗಡಲಲ್ಲಿ ಮುಳುಗಿಸಿದರು.

ನಂತರ ಅಮಿತಾಭ್ ಬಚ್ಚನ್ ಅವರ ಐತಿಹಾಸಿಕ 'ಶೋಲೆ' ಚಿತ್ರದ ವೀಕ್ಷಣೆಯ ಘಟನೆಯೊಂದನ್ನು ಕಮಲ್ ಹಾಸನ್ ಸ್ಮರಿಸಿದರು. ಆ ಚಿತ್ರವು ನನ್ನನ್ನು ಬಹಳ ಪ್ರಭಾವಿಸಿದ್ದರಿಂದ ಆ ಹೊತ್ತಿನಲ್ಲಿ ನಾನು ಸ್ವತಃ ಸಹಾಯಕ ನಿರ್ದೇಶಕನಾಗಿದ್ದರೂ, ಓರ್ವ ತಂತ್ರಜ್ಞನಾಗಿಯೂ ನಾನು ಆ ಚಿತ್ರವನ್ನು ದ್ವೇಷಿಸಿದ್ದೆ. "ಶೋಲೆ ಚಿತ್ರವನ್ನು ಮತ್ತೆ ಮತ್ತೆ ಮೆಲುಕು ಹಾಕುವವರಿಗೆ, ಆ ಸಂದರ್ಭದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ನಾನು ಶೋಲೆ ಚಿತ್ರವನ್ನು ನೋಡಿ ರಾತ್ರಿಯೆಲ್ಲ ನಿದ್ರಿಸಲು ಸಾಧ್ಯವಾಗಿರಲಿಲ್ಲ. ನಾನು ಆ ಚಿತ್ರವನ್ನು ಎಷ್ಟು ದ್ವೇಷಿಸುತ್ತಿದ್ದೆನೊ, ಅದಕ್ಕಿಂತ ಹೆಚ್ಚು ಆ ಚಿತ್ರ ನಿರ್ಮಿಸಿದವರನ್ನು ದ್ವೇಷಿಸುತ್ತಿದ್ದೆ. ನನಗೆ ಅದೇ ಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡಲು ಅವಕಾಶ ದೊರೆತಾಗ, ನಾನು ಆ ಚಿತ್ರವನ್ನು ನೋಡಿದಾಗ ನನ್ನ ಮೊದಲ ಪ್ರತಿಕ್ರಿಯೆ ಅದೇ ಆಗಿತ್ತು ಎಂದು ತಿಳಿಸಿದ್ದೆ. ಓರ್ವ ತಂತ್ರಜ್ಞನಾಗಿ ಅಂದು ರಾತ್ರಿ ನಾನು ನಿದ್ರಿಸಲಾಗಿರಲಿಲ್ಲ ಮತ್ತು ಆ ಚಿತ್ರ ಅಷ್ಟು ಉತ್ಕೃಷ್ಟವಾಗಿತ್ತು. ಇಂತಹ ಅನೇಕ ಚಿತ್ರಗಳನ್ನು ಅಮಿತಾಭ್ ಬಚ್ಚನ್ ಮಾಡಿದ್ದು, ನನ್ನ ಚಿತ್ರದ ಕುರಿತು ಕೆಲವು ಒಳ್ಳೆಯ ಮಾತನಾಡಿ ಎಂಬ ಅವರ ಮಾತನ್ನು ನನಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News