ಬಲಪಂಥೀಯರ ವಿರೋಧದ ಬಳಿಕ 'ಅನ್ನಪೂರಣಿ' ಚಿತ್ರಕ್ಕಾಗಿ ಕ್ಷಮೆಯಾಚಿಸಿದ ನಟಿ ನಯನತಾರಾ
ಚೆನ್ನೈ: ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ‘ಅನ್ನಪೂರಣಿ’ ಸಿನಿಮಾ ಕುರಿತು ನಟಿ ನಯನತಾರಾ ಕ್ಷಮೆ ಯಾಚಿಸಿದ್ದಾರೆ. ಗುರುವಾರ ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ನಯನತಾರಾ, ನಮ್ಮ ತಂಡವು ಯಾರದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ಸಿನಿಮಾದ ಕೆಲವು ಸನ್ನಿವೇಶಗಳು ಹಿಂದೂ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿವೆ, ಭಗವಾನ್ ರಾಮನಿಗೆ ಅಗೌರವವನ್ನುಂಟು ಮಾಡಿವೆ ಹಾಗೂ ‘ಲವ್ ಜಿಹಾದ್’ ಅನ್ನು ಪ್ರಚೋದಿಸಲಾಗಿದೆ ಎಂಬ ದೂರನ್ನು ಆಧರಿಸಿ ‘ಅನ್ನಪೂರಣಿ’ ಸಿನಿಮಾ ತಂಡದ ವಿರುದ್ಧ ಎಫ್ಐಆರ್ ದಾಖಲಾದ ನಂತರ ಅವರ ಈ ಹೇಳಿಕೆ ಹೊರಬಿದ್ದಿದೆ. ನೆಟ್ ಫ್ಲಿಕ್ಸ್ ಒಟಿಟಿ ವೇದಿಕೆಯಿಂದ ಸಿನಿಮಾವನ್ನು ತೆಗೆದು ಹಾಕಲಾಗಿದೆ.
“ಸಕಾರಾತ್ಮಕ ಸಂದೇಶವನ್ನು ಹರಡುವ ನಮ್ಮ ಪ್ರಾಮಾಣಿಕ ಪ್ರಯತ್ನದ ನಡುವೆ ನಾವು ಪ್ರಮಾದವಶಾತ್ ನೋವುಂಟು ಮಾಡಿದ್ದೇವೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದ ಸೆನ್ಸಾರ್ ಆಗಿದ್ದ ಸಿನಿಮಾವನ್ನು ಒಟಿಟಿ ವೇದಿಕೆಯಿಂದ ತೆಗೆದು ಹಾಕಲಾಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ನಾನು ಮತ್ತು ನನ್ನ ತಂಡ ಯಾರದ್ದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಹಾಗೂ ನಾವು ಈ ಪ್ರಕರಣದ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ದೇವರನ್ನು ನಂಬುವವರ ಪೈಕಿ ಒಬ್ಬಳಾಗಿ ಹಾಗೂ ಪದೇ ಪದೇ ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುವವಳಾಗಿ ನಾನು ಕೊನೆಯದಾಗಿ ಮಾಡಬಹುದಾದ ಒಂದು ಕೆಲಸವೆಂದರೆ, ಯಾರೆಲ್ಲರ ಭಾವನೆಗಳಿಗೆ ಧಕ್ಕೆಯಾಗಿದೆ ಅವರಿಗೆ ನನ್ನ ಪ್ರಾಮಾಣಿಕ ಮತ್ತು ಹೃದಯಪೂರ್ವಕ ಕ್ಷಮಾಪಣೆ ಕೋರುವುದಾಗಿದೆ” ಎಂದು ಗುರುವಾರ ಮಾಡಿರುವ ಪೋಸ್ಟ್ ನಲ್ಲಿ ನಯನ ತಾರಾ ಹೇಳಿಕೊಂಡಿದ್ದಾರೆ.
‘ಅನ್ನಪೂರಣಿ’ ಸಿನಿಮಾ ಹಿಂದಿದ್ದ ಉದ್ದೇಶ ಮೇಲೆತ್ತುವುದು ಹಾಗೂ ಪ್ರೇರಣೆ ನೀಡುವುದಾಗಿತ್ತೇ ಹೊರತು ಯಾವುದೇ ಘಾಸಿಯನ್ನುಂಟು ಮಾಡುವುದಲ್ಲ. ನನ್ನ ಕಳೆದ ಎರಡು ದಶಕಗಳ ಸಿನಿಮಾ ರಂಗದಲ್ಲಿನ ಪಯಣವು ಸಕಾರಾತ್ಮಕತೆಯನ್ನು ಹರಡುವುದು ಮತ್ತು ಇತರರಿಂದ ಕಲಿಯುವ ಏಕೈಕ ಉದ್ದೇಶದ ಮಾರ್ಗದರ್ಶನ ನೀಡಿದೆ ಎಂದೂ ನಯನ ತಾರಾ ಹೇಳಿಕೊಂಡಿದ್ದಾರೆ.
ತಮಿಳು ಸಿನಿಮಾವಾದ ‘ಅನ್ನಪೂರಣಿ’ಯಲ್ಲಿ ನಯನ ತಾರಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಯುವತಿಯೊಬ್ಬಳು ತನ್ನ ಬಾಣಸಿಗಳಾಗಬೇಕು ಎಂಬ ಪ್ರಯತ್ನದಲ್ಲಿ ಎದುರಿಸುವ ಅಡೆತಡೆ ಹಾಗೂ ಮನಃಕ್ಲೇಶವನ್ನು ಈ ಚಿತ್ರ ನಿರೂಪಿಸಿದೆ.