ನಯನತಾರಾ ನಟನೆಯ ‘ಅನ್ನಪೂರ್ಣಿ’ಯನ್ನು ತೆಗೆದುಹಾಕಿದ ನೆಟ್‌ಫ್ಲಿಕ್ಸ್; ವಿಶ್ವ ಹಿಂದೂ ಪರಿಷತ್ ನ ಕ್ಷಮೆ ಯಾಚಿಸಿದ ZEE5
ಹೊಸದಿಲ್ಲಿ: ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಚಿತ್ರದಲ್ಲಿನ ದೃಶ್ಯಗಳ ಕುರಿತು ಹಿಂದುತ್ವ ಗುಂಪುಗಳು ವಿವಾದವನ್ನು ಸೃಷ್ಟಿಸಿದ ಬಳಿಕ ನೆಟ್‌ಫ್ಲಿಕ್ಸ್ ನಯನತಾರಾ ಅಭಿನಯದ ‘ಅನ್ನಪೂರ್ಣಿ’ ಚಿತ್ರವನ್ನು ತೆಗೆದುಹಾಕಿದೆ. ಚಿತ್ರದ ನಿರ್ಮಾಣ ಸಂಸ್ಥೆ ZEE5 ಕೂಡ ವಿಶ್ವ ಹಿಂದೂ ಪರಿಷತ್ (ವಿಹಿಂಪ)ಗೆ ಕ್ಷಮೆಯನ್ನು ಕೋರಿ ಪತ್ರವನ್ನು ಬರೆದಿದೆ.
‘ಸಹ ನಿರ್ಮಾಪಕರಾಗಿ ಹಿಂದೂ ಮತ್ತು ಬ್ರಾಹ್ಮಣ ಸಮುದಾಯಗಳ ಬಗ್ಗೆ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ ಮತ್ತು ಆಯಾ ಸಮುದಾಯಗಳಿಗೆ ಉಂಟಾದ ಅನಾನುಕೂಲತೆ ಮತ್ತು ನೋವಿಗೆ ನಾವು ಈ ಮೂಲಕ ಕ್ಷಮೆಯನ್ನು ಕೋರುತ್ತೇವೆ’ ಎಂದು ZEE5 ಪತ್ರದಲ್ಲಿ ಹೇಳಿದೆ.
‘ಮರುಸಂಕಲನ ಮಾಡುವವರೆಗೆ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಿಂದ ತೆಗೆಯಲು ಸಹ ನಿರ್ಮಾಪಕರಾದ ಟ್ರೈಡಂಟ್ ಆರ್ಟ್ಸ್ ಜೊತೆಗೆ ನಾವು ಕಾರ್ಯಾಚರಿಸುತ್ತಿದ್ದೇವೆ’ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ಚಿತ್ರವು ಸೆನ್ಸಾರ್ ಬೋರ್ಡ್‌ನ ಹಸಿರು ನಿಶಾನೆಯೊಂದಿಗೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು.
ಅನ್ನಪೂರ್ಣಿಯು ಸಂಪ್ರದಾಯಸ್ಥ ಕುಟುಂಬದ ಬ್ರಾಹ್ಮಣ ಮಹಿಳೆ (ನಯನತಾರಾ) ಉನ್ನತ ಬಾಣಸಿಗಳಾಗುವ ಕಥೆಯನ್ನು ಹೊಂದಿದೆ. ಮಾಂಸವನ್ನು ತಿನ್ನುವ ಮತ್ತು ಮಾಂಸದ ಅಡುಗೆಯನ್ನು ಮಾಡುವ ನಾಯಕಿಯ ನಿರ್ಧಾರ, ಮುಸ್ಲಿಮ್ ಪಾತ್ರ (ಜೈ)ದೊಂದಿಗೆ ಆಕೆಯ ಸ್ನೇಹ ಮತ್ತು ಹಿಂದು ದೇವತೆ ಶ್ರೀರಾಮ ಮಾಂಸವನ್ನು ತಿಂದಿದ್ದ ಎನ್ನುವುದನ್ನು ಸೂಚಿಸುವ ಸಂಭಾಷಣೆ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿವೆ ಎಂದು ವಿಹಿಂಪ ಆಪಾದಿಸಿದೆ.
ಇದಕ್ಕೂ ಮುನ್ನ ಹಿಂದು ಐಟಿ ಸೆಲ್‌ನ ಸ್ಥಾಪಕ ರಮೇಶ ಸೋಲಂಕಿ ಎನ್ನುವವರ ದೂರಿನ ಮೇರೆಗೆ ಮುಂಬೈನಲ್ಲಿ ನಾಯಕ ನಟರಾದ ಜೈ ಮತ್ತು ನಯನತಾರಾ, ಲೇಖಕ-ನಿರ್ದೇಶಕ ನಿಲೇಶ ಕೃಷ್ಣ, ನಿರ್ಮಾಪಕರಾದ ಜತಿನ್ ಸೇಠಿ, ಆರ್.ರವೀಂದ್ರನ್ ಮತ್ತು ಪುನೀತ ಗೊಯೆಂಕಾ, ಝೀ ಸ್ಟುಡಿಯೋದ ಚೀಫ್ ಬಿಸಿನೆಸ್ ಆಫೀಸರ್ ಶಾರಿಕ್ ಪಟೇಲ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾದ ಮುಖ್ಯಸ್ಥೆ ಮೋನಿಕಾ ಶೇರಗಿಲ್ ವಿರುದ್ಧ ಜ.8ರಂದು ಎಫ್‌ಐಆರ್ ದಾಖಲಾಗಿತ್ತು.