ಕ್ಯಾಂಪ್ಕೊ ಸಂಸ್ಥೆಗೆ 22 ಕೋಟಿ ರೂ. ಲಾಭ: ಕಿಶೋರ್ ಕುಮಾರ್ ಕೊಡ್ಗಿ
ಮಂಗಳೂರು: ಕಳೆದ ಸಾಲಿನಲ್ಲಿ ಭಾರಿ ಮಳೆ , ಮುಕ್ತ ಆಮದು ನೀತಿ, ಚಾಲಿ ಅಡಿಕೆ ಗುಣಮಟ್ಟ ಕೊರತೆ, ಉತ್ತರ ಭಾರತದಲ್ಲಿ ಅಡಿಕೆ ಬೇಡಿಕೆ ಕುಸಿತ ಹೀಗೆ ನಾನಾ ಸವಾಲುಗಳಿದ್ದರೂ ಇವೆಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿರುವ ಕ್ಯಾಂಪ್ಕೊ ಸಂಸ್ಥೆ 2022-23ನೇ ಸಾಲಿನಲ್ಲಿ 22 ಕೋಟಿ. ರೂ ಲಾಭ ಗಳಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
ಮಂಗಳೂರಿನ ಸಂಘನಿಕೇತನದಲ್ಲಿ ಬುಧವಾರ ನಡೆದ ಕ್ಯಾಂಪ್ಕೋ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷದ ಅಂತ್ಯದೊಳಗೆ 30 ಕೋಟಿ ರೂ ಲಾಭ ಗಳಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬೈಲಾಕ್ಕೂ ತಿದ್ದುಪಡಿ: ಕ್ಯಾಂಪ್ಕೋ ತನ್ನ ಬೈಲಾದಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅಡಕೆ, ಕೊಕ್ಕೊ , ರಬ್ಬರ್, ಗೇರು, ತೆಂಗಿನಕಾಯಿ ಜತೆಗೆ ಸಾಂಬಾರ, ಕಾಫಿ, ಔಷಧೀಯ ಉತ್ಪನ್ನ ಹಾಗೂ ತಾಳೆ ಬೆಳೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹಳದಿ ಎಲೆ ರೋಗಕ್ಕೂ ಸಂಶೋಧನೆಗೆ ಅನುದಾನ ನೀಡಲಾಗುವುದು. ಆಡಳಿತ ಮಂಡಳಿಗೆ ನಿರ್ದೇಶಕರ ಸಂಖ್ಯೆಯನ್ನು 19ಕ್ಕೆ ಏರಿಕೆ ಮಾಡಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದರು.
ಅಡಕೆ ಕೃಷಿಕರಿಗೆ ಮಣ್ಣಿನ ಫಲವತ್ತತೆ ಹಾಗೂ ಹೆಚ್ಚಿನ ಇಳುವರಿಗಾಗಿ ಕ್ಯಾಂಪ್ಕೋ ತನ್ನದೇ ಬ್ರ್ಯಾಂಡ್‌ನಲ್ಲಿ ತಯಾರಿಸಿರುವ ಕ್ಯಾಂಪ್ಕೊ ಆಯುಷ್ ಹಾಗೂಕ್ಯಾಂಪ್ಕೊ ಪೌಷ್ಠಿಕ್‌ನ್ನು ಅಡಕೆ ಟಾಸ್ಕ್‌ಪೊರ್ಸ್ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ಬಗ್ಗೆ ಸಂಶೋಧನಾ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಶೀಘ್ರವೇ ಸಲ್ಲಿಸಲಾಗುವುದು ಎಂದರು.
ಇದೇ ಸಂದರ್ಭ ರಾಷ್ಟ್ರಪತಿಗಳಿಂದ ಸಸ್ಯತಳಿ ಸಂರಕ್ಷಕ ಪುರಸ್ಕಾರ ಪಡೆದ ಬಿ.ಕೆ.ದೇವರಾಯ ಹಾಗೂ ಕರಿಮೆಣಸು ಸಂಸ್ಕರಣಾ ಯಂತ್ರ ಆವಿಷ್ಕರಿಸಿದ ಗೋಪಾಲಕೃಷ್ಣ ಶರ್ಮ ಇವರಿಗೆ ಆರ್‌ಎಸ್‌ಎಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಕ್ಯಾಂಪ್ಕೋ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುವರ್ಣ ಮಹೋತ್ಸವ ಸಲುವಾಗಿ ಹೊರತಂದ ಪೂಗಸಿರಿ ಸ್ಮರಣ ಸಂಚಿಕೆಯನ್ನು ಆರ್‌ಎಸ್‌ಎಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗ, ಎಸ್.ಆರ್.ಸತೀಶ್ಚಂದ್ರ, ದಯಾನಂದ್ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ.ಹೆಗಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ್ ನಾರಾಯಣ್, ರಾಧಾಕೃಷ್ಣನ್, ಸತ್ಯ ನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್, ಜನರಲ್ ಮೆನೇಜರ್ ರೇಷ್ಮಾ ಮಲ್ಯ, ಡಿಜಿಎಂ ಪರಮೇಶ್ವರ್, ಮಾರುಕಟ್ಟೆ ಮುಖ್ಯಸ್ಥ ಗೋವಿಂದ ಭಟ್, ಚಾಕಲೇಟ್ ಮಾರುಕಟ್ಟೆ ಮುಖ್ಯಸ್ಥ ಶ್ಯಾಮ ಪ್ರಸಾದ್, ಸಿಎಗಳಾದ ಪ್ರವೀಣ್ ಕುಮಾರ್, ಪ್ರಕಾಶ್, ಆರ್.ಡಿ.ಶಾಸ್ತ್ರಿ, ಚಂದ್ರಕಾಂತ್ ರಾವ್, ಲೆಕ್ಕ ಪರಿಶೋಧಕ ರಮೇಶ್ ಉಪಸ್ಥಿತರಿದ್ದರು.