ಬಜರಂಗದಳ ಮುಖಂಡ, ಕೊಲೆ ಆರೋಪಿಯ ತಂಡದಿಂದ ವ್ಯಕ್ತಿಗೆ ಹಲ್ಲೆ: ವೀಡಿಯೊ ವೈರಲ್‌

Update: 2023-10-05 17:47 GMT

ಉಪ್ಪಿನಂಗಡಿ: ಬಜರಂಗದಳ ಮುಖಂಡ ಮತ್ತು ಆತನ ತಂಡದವರು ಸೇರಿ ಅಂಗಡಿಗೆ ನುಗ್ಗಿ ನಾಲ್ವರ ಮೇಲೆ ಹಲ್ಲೆಗೈದು ಗೂಂಡಾಗಿರಿ ಮೆರೆದಿರುವ ಘಟನೆ ಉಪ್ಪಿನಂಗಡಿ ಪೇಟೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಘಟನೆ ಸೆ.23ರಂದು ಉಪ್ಪಿನಂಗಡಿಯಲ್ಲಿ ಪೇಟೆಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಈ ಕುರಿತ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಪ್ರಕರಣದ ವಿವರ: ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗಟು ಪಾಸ್ವಾನ್ (35) ಎಂಬಾತ ಕಳೆದ ಸೆ.24ರಂದು ದೂರು ನೀಡಿದ್ದು, ʼತಾನು ನೆಕ್ಕಿಲಾಡಿಯ ಜಗಜ್ಜೀವನ್ ರೈ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ.23ರಂದು ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ನನ್ನ ಧಣಿಯವರಿಗೆ ಸೇರಿದ ಹಳೆಯ ಕಟ್ಟಡದ ದುರಸ್ತಿ ಮಾಡುತ್ತಿದ್ದ ಸಂದರ್ಭ ಮಧ್ಯಾಹ್ನ 3:10ರ ಸುಮಾರಿಗೆ ಆರೋಪಿಗಳಾದ ಉಪ್ಪಿನಂಗಡಿ ನಿವಾಸಿ ಸುದರ್ಶನ ಹಾಗೂ 10-15 ಮಂದಿ ಗುಂಪು ಅಕ್ರಮ ಪ್ರವೇಶ ಮಾಡಿ ನನ್ನನ್ನು ಉದ್ದೇಶಿಸಿ ಇಲ್ಲಿಂದ ಎಲ್ಲರೂ ಹೋಗಿ ಎಂದು ಹೇಳಿದ್ದಲ್ಲದೆ, ನನಗೆ ಜಾತಿ ನಿಂದನೆ ಮಾಡಿ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಜಗಜ್ಜೀವನ್ ರೈಯವರಿಗೆ 10-15 ಮಂದಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆʼ 

ʼಜಗಜ್ಜೀವನ್ ರೈ ಹಾಗೂ ಆರೋಪಿ ಸುದರ್ಶನ್‍ಗೂ ಜಾಗದ ಕಟ್ಟಡದ ವಿಚಾರದಲ್ಲಿ ತಕರಾರು ಇದ್ದು, ಧಣಿಯವರು ಕಟ್ಟಡದ ದುರಸ್ತಿ ಕೆಲಸವನ್ನು ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ಕೃತ್ಯವೆಸಗಿದ್ದಾರೆʼ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈರಲ್ ವಿಡಿಯೋದಲ್ಲೇನಿದೆ?: ಈ ಪ್ರಕರಣ ನಡೆದು ಹಲವು ದಿನಗಳಾದರೂ, ಹಲ್ಲೆಯ ವಿಡಿಯೋ ಅ.5ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣದ ಆರೋಪಿಯಾಗಿರುವ ಸುದರ್ಶನ್ ಎಂಬವರು ವಿಶ್ವ ಹಿಂದೂ ಪರಿಷತ್‍ನ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷರಾಗಿದ್ದು, ಅವರೂ ಸೇರಿದಂತೆ 10-15 ಜನರು ಈ ಕಟ್ಟಡದೊಳಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರಗಡೆ ದೂಡುವ ಹಾಗೂ ಜಗಜ್ಜೀವನ್ ರೈ ಸೇರಿದಂತೆ ಕೆಲವರಿಗೆ ಹಲ್ಲೆ ನಡೆಸುವ ದೃಶ್ಯ ದಾಖಲಾಗಿದೆ. ಈ ಹಲ್ಲೆ ನಡೆಸಿದ 10- 15 ಜನ ಬಜರಂಗದಳ- ವಿಶ್ವಹಿಂದೂಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡವರೆನ್ನಲಾಗಿದ್ದು, ಇದರಲ್ಲಿ ಓರ್ವ ಭರತ್ ಕುಮ್ಡೇಲು ಎನ್ನಲಾಗುತ್ತಿದೆ. ಈ ಹಲ್ಲೆ ನಡೆದ ಸಂದರ್ಭ ಸ್ಥಳೀಯ ಕೆಲವು ಮುಸ್ಲಿಮರು ಹಲ್ಲೆಗೊಳಗಾದವರ ರಕ್ಷಣೆಗೆ ಮುಂದಾಗಿದ್ದು, ಕಂಡು ಬರುತ್ತಿದೆ. ಒಟ್ಟಿನಲ್ಲಿ ಹಿಂದುತ್ವ ಸಂಘಟನೆಯಲ್ಲಿ ಗುರುತಿಸಿಕೊಂಡವರೇ ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. 

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News