ಬಿ.ಸಿ.ರೋಡ್ | ಪರಿಸ್ಥಿತಿ ನಿಯಂತ್ರಣದಲ್ಲಿ: ಬಿಗು ಪೊಲೀಸ್ ಬಂದೋಬಸ್ತ್

Update: 2024-09-16 10:39 GMT

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮತ್ತು ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ರ ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ನಲ್ಲಿ ಇಂದು ಸೋಮವಾರ ಬೆಳಗ್ಗೆ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಮಧ್ಯಾಹ್ನದ ವೇಳೆಗೆ ತಿಳಿಯಾಗಿದೆ. ಬಿ.ಸಿ.ರೋಡ್ ಪರಿಸರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಸಂಘ ಪರಿವಾರದ ಬಿ.ಸಿ.ರೋಡ್ ಚಲೋ ಕರೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಇಂದು ಬೆಳಗ್ಗೆ ಜಮಾಯಿಸಿದ ಕಾರ್ಯಕರ್ತರು, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮುಂದೆ ಸಾಗಲು ಮುಂದಾದಾಗ ಅವರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕಾಟ ತಳ್ಳಾಟ ನಡೆಯಿತು. ಬಳಿಕ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ಗುಂಪನ್ನು ತಡೆದರು.

ಬಳಿಕ ಹೆದ್ದಾರಿಯಲ್ಲೇ ಕೆಲಹೊತ್ತು ಸಂಘ ಪರಿವಾರದ ಕಾರ್ಯಕರ್ತರು ಘೋಷಣೆ ಕೂಗಿದರು. ಸಂಘದ ಪರಿವಾರದ ಪ್ರಮುಖರಾದ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ, ಆರ್. ಚೆನ್ನಪ್ಪ ಕೋಟ್ಯಾನ್, ಎ.ಗೋವಿಂದ ಪ್ರಭು, ಪ್ರಸಾದ್ ಕುಮಾರ್ ರೈ ಬಂಟ್ವಾಳ, ಭಾಸ್ಕರ್ ಧರ್ಮಸ್ಥಳ, ನವೀನ್ ನೆರಿಯಾ, ಭುಜಂಗ ಕುಳಾಲ್, ಗುರುರಾಜ್ ಬಂಟ್ವಾಳ, ನರಸಿಂಹ ಮಾಣಿ, ಮಹೇಶ್ ಬೈಲೂರು, ಕೃಷ್ಣಪ್ರಸಾದ್, ಮಿಥುನ್ ಕಲ್ಲಡ್ಜ, ನವೀನ್ ಮೂಡುಶೆಡ್ಡೆ, ಸಚಿನ್ ಮೆಲ್ಕಾರ್, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಪುರುಷೋತ್ತಮ ಸಾಲ್ಯಾನ್, ರಾಮ್ ದಾಸ್ ಬಂಟ್ವಾಳ ಮತ್ತಿತರರು ಭಾಗವಹಿಸಿದ್ದರು .

ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ಯತೀಶ್ ಎನ್. ಎ.ಸಿ.ಹರ್ಷವರ್ಧನ್, ತಹಶೀಲ್ದಾರ್ ಅರ್ಚನಾ ಭಟ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿ.ಸಿ.ರೋಡ್ ಪರಿಸರದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ.

ಈ ನಡುವೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುವ ಮುಹಮ್ಮದ್ ಶರೀಫ್ ಹಾಗೂ ಪುರಸಭಾ ಸದಸ್ಯ ಹಸೈನಾರ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು ಅವರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಶರಣ್ ಪಂಪ್ ವೆಲ್ ಮತ್ತು ಪುನೀತ್ ಅತ್ತಾವರ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News