ಚಂದ್ರಯಾನ - 3 ತಂಡದಲ್ಲಿ ಸುಳ್ಯದ ಮೂವರು ವಿಜ್ಞಾನಿಗಳು

Update: 2023-08-24 13:37 GMT

ಶಂಭಯ್ಯ ಕೊಡಪಾಲ, ವೇಣುಗೋಪಾಲ ಉಬರಡ್ಕ, ಮಾನಸ ಜಯಕುಮಾರ್

ಸುಳ್ಯ: ಇಸ್ರೋದ ಚಂದ್ರಯಾನ - 3 ಟೀಮ್‍ನಲ್ಲಿ ಸುಳ್ಯ ತಾಲೂಕಿನ ಮೂವರು ವಿಜ್ಞಾನಿಗಳು ಕಾರ್ಯನಿರ್ವಹಿಸಿದ್ದಾರೆ.

ಸುಳ್ಯ ತಾಲೂಕಿನವರಾದ ಶಂಭಯ್ಯ ಕೊಡಪಾಲ, ವೇಣುಗೋಪಾಲ ಉಬರಡ್ಕ ಹಾಗೂ ದುಗ್ಗಲಡ್ಕದ ಮಾನಸ ಜಯಕುಮಾರ್ ಚಂದ್ರಯಾನ ಯಶಸ್ಸಿನಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲದವರಾದ ಶಂಭಯ್ಯ ಕೆ ಅವರು ಇಸ್ರೊದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ್ ಮಿಷನ್‍ನಲ್ಲಿ ಎಲ್‍ಪಿಎಸ್ ವಿಭಾಗದ ಯೂನಿಟ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ನಲ್ಲಿ ಶಂಭಯ್ಯ ಕೊಡಪಾಲ ನೇತೃತ್ವದ ತಂಡ ಪ್ರಧಾನ ಪಾತ್ರ ವಹಿಸಿದೆ. ಚಂದ್ರಯಾನ-2ರ ಉಡಾವಣೆಯಲ್ಲಿಯೂ ಶಂಭಯ್ಯರವರು ಕರ್ತವ್ಯ ಸಲ್ಲಿಸಿದ್ದರು.

ಉಬರಡ್ಕದ ವೇಣುಗೋಪಾಲ ಉಬರಡ್ಕ ಅವರು ಇಸ್ರೋದಲ್ಲಿ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ -3ರಲ್ಲಿ ಪಿಸಿಬಿ ಡಿಸೈನಿಂಗ್ ಟೀಂ ಸ್ಯಾಟ್‍ಲೈಟ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವೇಣುಗೋಪಾಲ್ ಅವರು ಸುಳ್ಯದಲ್ಲಿ ಪಾಲಿಟೆಕ್ನಿಕ್ ತಾಂತ್ರಿಕ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಬಿಇ, ಎಂಇ ಶಿಕ್ಷಣ ಪಡೆದು ಇಸ್ರೋದಲ್ಲಿ ವಿಜ್ಞಾನಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಳ್ಯ ದುಗಲಡ್ಕದ ಮಾನಸ ಜಯಕುಮಾರ್ ಅವರು ಮಂಗಳೂರು ವಿವಿಯಲ್ಲಿ ಮಂಗಳಗ್ರಹದ ವಿಚಾರವಾಗಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ.

ಶುಕ್ರ ಗ್ರಹದ ಕುರಿತು ಸಂಶೋಧನೆಯನ್ನು ಈಗಾಗಲೇ ಪೂರ್ತಿಗೊಳಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಚಂದ್ರಯಾನ - 3 ವಿಚಾರದಲ್ಲಿ ಪ್ರಾಜೆಕ್ಟ್ ವರ್ಕ್ ಶಾಪ್‍ನಲ್ಲಿ ಕರ್ನಾಟಕದಿಂದ ಆಯ್ಕೆ ಯಾಗಿ ಭಾಗವಹಿಸಿದ್ದರು. ಚಂದ್ರಯಾನ -3 ಉಪಗ್ರಹದ ಆ್ಯಂಟನಾ ತಯಾರಿಕೆಯ 5 ಜನರ ತಂಡದಲ್ಲಿ ಮಾನಸ ಕೂಡಾ ಒಬ್ಬರಾಗಿದ್ದರು.

ಮಂಡೆಕೋಲು ಗ್ರಾಮದ ಜಾಲಬಾಗಿಲು ಬಾಲಕೃಷ್ಣ - ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಮಾನಸ, ಸುಳ್ಯ ದುಗಲಡ್ಕ ಜಯಕುಮಾರ್ ಬಿ.ಎಸ್. ರವರ ಪತ್ನಿ. ಜಯಕುಮಾರ್ ರವರು ಮಂಗಳೂರು ವಿವಿ ಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾರೆ. ಇವರ ಮಗಳು ಸನ್ನಿಧಿ ಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News