ವಾಲ್ಮೀಕಿ ಆದರ್ಶ ಮೈಗೂಡಿಸಿಕೊಂಡು ಸಿಎಂ ರಾಜೀನಾಮೆ ನೀಡಲಿ: ಕ್ಯಾ. ಬ್ರಿಜೇಶ್ ಚೌಟ

Update: 2024-10-17 08:56 GMT

ಮಂಗಳೂರು, ಅ.17: ವಾಲ್ಮೀಕಿ ನಿಗಮ ಹಗರಣದ ಆರೋಪಿ ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿಯಾಗಿ ವಿಜಯೋತ್ಸವದ ರೀತಿಯಲ್ಲಿ ಅವರಿಗೆ ಶಾಲು ಹಾಕಿರುವುದನ್ನು ನೋಡಿದಾಗ ಹಗರಣದಲ್ಲಿ ಮುಖ್ಯಮಂತ್ರಿಗಳ ಪ್ರೇರಣೆ ಇರುವಂತೆ ಭಾಸವಾಗುತ್ತಿದೆ. ವಾಲ್ಮೀಕಿ ದಿನಾಚರಣೆಯ ಪ್ರಯುಕ್ತ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಮೇಲಿನ ಆರೋಪಗಳ ಪಾರದರ್ಶಕ ತನಿಖೆಗೆ ಪೂರಕವಾಗಿ ಸಿಎಂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸದ್ಯ ಕರ್ನಾಟಕವೇ ಎಟಿಎಂ ಆಗಿದ್ದು, ಇದೀಗ ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಾಲ್ಮೀಕಿ ಹಗರಣದ ಎ1 ಆರೋಪಿ ನಾಗೇಂದ್ರ ಅವರಿಂದ ಸಲಹೆ ಸೂಚನೆ ಪಡೆದಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ವಾಲ್ಮೀಕಿ ಅವರ ಆದರ್ಶಗಳು, ತಮ್ಮ ಬದುಕಿನಲ್ಲಿ ಮಾಡಿದ ಸಾಧನೆಗಳು ಆದರ್ಶ ಆಗಬೇಕಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಪಂಗಡದ ಅಭ್ಯುದಯಕ್ಕಾಗಿ ಮೀಸಲಿತ್ತ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದು ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ನಡೆದಿರುವಾಗ ವಾಲ್ಮೀಕಿ ದಿನಾರಣೆಯನ್ನು ಬೇಸರದಿಂದ ಆಚರಿಸಬೇಕಾಗಿ ಬಂದಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಸಿಎಂ ನಿರ್ದೇಶನದ ಮೇರೆಗೆ ವಾಲ್ಮೀಕಿ ಹಗರಣ ನಡೆದಿದೆ ಎಂಬ ಬಿಜೆಪಿಯ ಆರೋಪಕ್ಕೆ ಪೂರಕವಾಗಿ ಮುಖ್ಯಮಂತ್ರಿಯವರೇ ವಿಧಾನಸಭೆಯಲ್ಲಿ ಆ ಹಗರಣ 187 ಕೋಟಿ ರೂ. ಅಲ್ಲ, 84 ಕೋಟಿ ರೂ. ಎಂದು ಹೇಳುವ ಮೂಲಕ ಹಗರಣ ಆಗಿರುವುದನ್ನು ಒಪ್ಪಿಕೊಂಡಿರುವಂತಾಗಿದೆ. ಕಳೆದ ಒಂದು ವರ್ಷದ ಆಡಳಿತಾವಧಿಯಲ್ಲಿ ಹೊಸ ಹೊಸ ಭ್ರಷ್ಟಾಚಾರಗಳು ಹೊರ ಬರುತ್ತಿವೆ. ಮೈಸೂರು ಮುಡಾ ಹಗರಣದಲ್ಲಿ ದಲಿತರ ಭೂಮಿ ನುಂಗಲಾಗಿದ್ದರೆ, ವಾಲ್ಮೀಕಿ ಹಗರಣದಲ್ಲಿ ದಲಿತ ಹಣ ನುಂಗಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಆಪಾದಿಸಿದರು.

ಬಿಜೆಪಿಯ ಕೆಲ ನಾಯಕರು, ಮಾಜಿ ಸಚಿವರ ಮೇಲೂ ಸಾಕಷ್ಟು ಆರೋಪಗಳು ಕಾಂಗ್ರೆಸ್‌ನಿಂದ ಕೇಳಿ ಬರುತ್ತಿವೆಯಲ್ಲಾ ಎಂಬ ಪ್ರಶ್ನೆಗೆ, ಆರೋಪಗಳ ಬಗ್ಗೆ ತನಿಖೆ ಆಗಲಿ ಎಂದು ಸಂಸದ ಬ್ರಿಜೇಶ್ ಪ್ರತಿಕ್ರಿಯಿಸಿದರು.

ಗುರುತರವಾದ ಆರೋಪ ಕೇಳಿ ಬರುವಾಗ ಪಾರದರ್ಶಕ ತನಿಖೆಗೆ ಪೂರಕವಾಗಿ ರಾಜೀನಾಮೆ ನೀಡಬೇಕು ಎಂಬುದು ನಮ್ಮ ಆಗ್ರಹ ಎಂದು ಮತ್ತೊಂದು ಪ್ರಶ್ನೆಗೆ ಸಂಸದರು ಉತ್ತರಿಸಿದರು.

ಸುದ್ದಿಗೋಷ್ಟಿಯಲ್ಲಿ ಮೇಯರ್ ಮನೋಜ್ ಕುಮಾರ್, ಪ್ರೇಮಾನಂದ ಶೆಟ್ಟಿ, ಮುಖಂಡರಾದ ಕದ್ರಿ ಮನೋಹರ್ ಶೆಟ್ಟಿ, ಯತೀಶ್ ಆರ್ವರ್, ಕ್ಯಾ. ಗಣೇಶ್ ಕಾರ್ಣಿಕ್, ಸಂಜಯ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News