ಮರಣ ದೃಢೀಕರಣ ಪತ್ರಕ್ಕಾಗಿ ಲಂಚದ ಬೇಡಿಕೆ; ಚೇಳ್ಯಾರು ಗ್ರಾಮದ VA ಲೋಕಾಯುಕ್ತ ಬಲೆಗೆ

Update: 2023-11-25 02:32 GMT

ಮಂಗಳೂರು, ನ.24: ಮರಣ ದೃಢೀಕರಣಕ್ಕಾಗಿ ಲಂಚದ ಪಡೆಯುತ್ತಿದ್ದ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ VA ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮರಣ ದೃಢೀಕರಣ ಪತ್ರಕ್ಕಾಗಿ ದೂರುದಾರರಿಂದ 13,000 ರೂ. ಲಂಚ ಪಡೆದ ಆರೋಪದಲ್ಲಿ ಚೇಳ್ಯಾರು ಗ್ರಾಮದ VA (ಗ್ರಾಮ ಆಡಳಿತ ಅಧಿಕಾರಿ) ವಿಜಿತ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಲಂಚದ ಹಣ ವಶಪಡಿಸಿಕೊಂಡಿ ದ್ದಾರೆ.  ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ತಿಳಿಸಿದ್ದಾರೆ.

ಪ್ರಕರಣದ ವಿವರ:

ದೂರುದಾರರು ತನ್ನ ತಾಯಿಯ ಹೆಸರಿನಲ್ಲಿ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ 42 ಸೆಂಟ್ಸ್ ಜಮೀನಿನಲ್ಲಿ 5 ಸೆಂಟ್ಸ್ ಜಮೀನನ್ನು ಮಾರಾಟಕ್ಕೆ ತೀರ್ಮಾನಿಸಿದ್ದರು. ಈ ಬಗ್ಗೆ ದಾಖಲಾತಿಗಾಗಿ ಅಜ್ಜನ ಮರಣ ಪ್ರಮಾಣ ಪತ್ರ ಹಾಗೂ ಸಂತತಿ ನಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಿಳಿಸಲಾಗಿತ್ತು.

ಸೆಪ್ಟಂಬರ್‌ ನಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಅಜ್ಜನ ಮರಣದ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ದೂರುದಾರರು ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನ. 20ರಂದು ಗ್ರಾಮ ಆಡಳಿತ ಅಧಿಕಾರಿಯ ಮೊಬೈಲ್ ನಂಬರಿಗೆ ಕರೆ ಮಾಡಿ ಮಾತನಾಡಿದಾಗ ದೃಢೀಕರಣ ಪತ್ರ ಸಿದ್ಧವಿದೆ. 15,000 ರೂ. ತರುವಂತೆ ತಿಳಿಸಿದ್ದರು. ಆದರೆ ತನ್ನಲ್ಲಿ ಅಷ್ಟು  ಹಣ ಇಲ್ಲ ಎಂದಾಗ ನಾಳೆ ಕೊಡಿ ಎಂದು ತಿಳಿಸಿದ್ದರು.

ನ. 22ರಂದು ದೂರುದಾರರು ಚೇಳ್ಯಾರು ಗ್ರಾಮ ಕರಣಿಕರ ಕಚೇರಿಗೆ ಹೋಗಿ ಗ್ರಾಮ ಆಡಳಿತ ಅಧಿಕಾರಿ ಬಳಿ ಮಾತನಾಡಿದಾಗ, ಮರಣ ದೃಢೀಕರಣ ಪತ್ರ ನೀಡಲು 15,000 ರೂ. ನಾಡಕಚೇರಿಗೆ ಬಂದು ಪಾವತಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಸ್ವಲ್ಪ ಹಣ ಕಡಿಮೆ ಇದೆ ಎಂದಾಗ ಎರಡು ಸಾವಿರ ಕಮ್ಮಿ ಮಾಡಿ ಕೊಡಿ ಎಂದು ಹೇಳಿದ್ದರು.

ಅದರಂತೆ ದೂರುದಾರರಿಂದ ವಿಜಿತ್‌  13,000 ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪೊಲೀಸ್ ಎಸ್ಪಿ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕ ಚಲುವರಾಯ ಬಿ. ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಸ್ ಪಿ. ಅವರು ಸಿಬ್ಬಂದಿ ಜತೆ ಈ ಕಾರ್ಯಾಚರಣೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News