ದ.ಕ. ಕಾಂಗ್ರೆಸ್‌ ಕಚೇರಿಯಲ್ಲೇ ಮುಖಂಡರ ನಡುವೆ ಹೊಡೆದಾಟ

Update: 2024-12-02 08:20 GMT

ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾ.ಪಂ‌ ಸದಸ್ಯರು ಹಾಗೂ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕರ ನಡುವೆ ಮಾರಾಮಾರಿ ನಡೆದಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಡೆದ ಗ್ರಾಪಂ ಉಪ ಚುನಾವಣೆಯಲ್ಲಿ ಗೆದ್ದವರಿಗೆ ಪಕ್ಷದ ವತಿಯಿಂದ ಸನ್ಮಾನಿಸುವ ವಿಷಯದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಚಂದ್ರ ಶೆಟ್ಟಿ ಅವರ ಮಧ್ಯೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಡಿಕೊಂಡರು ಎನ್ನಲಾಗಿದೆ.

 ಪಕ್ಷದ ಜಿಲ್ಲಾ ನಾಯಕರ ಮಧ್ಯೆ ಕೆಲವು ದಿನದಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಅದು ಇಂದು ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. KPCC ಕಾರ್ಯಾಧ್ಯಕ್ಷ ಮಂಜುನಾಥ್‌ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಎಂಎಲ್‌ಸಿ ಐವನ್‌ ಡಿಸೋಜ, ಮಿಥುನ್‌ ರೈ, ಇನಾಯತ್‌ ಅಲಿ ಉಪಸ್ಥಿತರಿದ್ದ ಸಭೆಯಲ್ಲೇ ಮುಖಂಡರ ನಡುವೆ ಹೊಡೆದಾಟ ನಡೆದಿದೆ.

ಉಪಚುನಾವಣೆಯಲ್ಲಿ ಗೆದ್ದವರಿಗೆ ವೇದಿಕೆಯ ಮೇಲೆ ಸನ್ಮಾನಿಸಬೇಕು ಎಂದು ಪ್ರಕಾಶ್ ಚಂದ್ರ ಶೆಟ್ಟಿ ತುಂಬೆ ಸಲಹೆ ನೀಡಿದರು. ಅದಕ್ಕೊಪ್ಪದ ಅಧ್ಯಕ್ಷ ಹರೀಶ್ ಕುಮಾರ್ ಗೆದ್ದ ಅಭ್ಯರ್ಥಿಗಳು ಕುಳಿತಲ್ಲೇ ಸನ್ಮಾನಿಸಲಾಗುವುದು ಎಂದಾಗ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿಕೊಂಡಿದ್ದಾರೆ  ಎನ್ನಲಾಗಿದೆ.

 ಆದರೆ ಬಳಿಕ ಹೊರಬಂದ ಚಂದ್ರ ಪ್ರಕಾಶ್ ಶೆಟ್ಟಿಯವರು ಸ್ವಲ್ಪ ಮಾತಾಗಿದೆ, ಬೇರೇನೂ ಸಮಸ್ಯೆಯಿಲ್ಲ, ಎಲ್ಲ ಅಲ್ಲೇ ಮುಗಿದಿದೆ, ಹೊಡೆದಾಟ ಆಗಿಲ್ಲ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News