ನಿಷ್ಪಕ್ಷ, ನಿಖರ ಸುದ್ದಿಗಳಿಗಾಗಿ ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಅಗತ್ಯವಿದೆ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್

Update: 2025-01-09 15:39 GMT

ಮಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೇರಿದ ಬಳಿಕ ಸಾಮಾಜಿಕ ಮಾಧ್ಯಮ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸರಕಾರವನ್ನು ಟೀಕಿಸುತ್ತಿದ್ದ ಅನೇಕ ಮಾಧ್ಯಮಗಳು ಬದಲಾದ ರಾಜಕೀಯ ವಿದ್ಯಮಾನಗಳ ಬಳಿಕ ಸರಕಾರವನ್ನು ಹೊಗಳಲು ಆರಂಭಿಸಿದವು. ಇದು ಡಿಜಿಟಲ್ ಮಾಧ್ಯಮಗಳ ಮೇಲೆ ಆಗಿರುವ ರಾಜಕೀಯ ಶಕ್ತಿಯ ಪ್ರಭಾವದ ಪರಿಣಾಮವಾಗಿದೆ. ಈ ರೀತಿ ಸರಕಾರಿ ಪ್ರೇರಿತ ಸುಳ್ಳು ಸುದ್ದಿಗಳು ಹರಡುವುದನ್ನು ತಡೆಗಟ್ಟಲು ಹಾಗೂ ನಿಷ್ಪಕ್ಷ, ನಿಖರ ಸುದ್ದಿಗಳಿಗಾಗಿ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ ಎಂದು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮುಹಮ್ಮದ್ ಝುಬೇರ್ ಹೇಳಿದರು.

ಈದಿನ ಡಾಟ್ ಕಾಮ್ ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರಕಟಿಸಿರುವ ‘ನಮ್ಮ ಕರ್ನಾಟಕ ನಡೆದ 50 ಹೆಜ್ಜೆ... ಮುಂದಿನ ದಿಕ್ಕು’ ವಿಶೇಷ ಸಂಚಿಕೆಯನ್ನು ನಗರದ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಆವರಣದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಇಂದು ಬಹುತೇಕ ಮಾಧ್ಯಮಗಳು ಆಡಳಿತದಲ್ಲಿರುವ ರಾಜಕೀಯ ಪಕ್ಷಗಳ ಪರವಾಗಿ ಆಯ್ದ ಸುದ್ದಿಗಳನ್ನು ಮಾತ್ರ ವರದಿ ಮಾಡುತ್ತಿವೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಸಂಬಂಧಿಸಿದ ಸಕಾರಾತ್ಮಕ ಸುದ್ದಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿವೆ. ಬಿಜೆಪಿಯೇತರ ಸರಕಾರವಿರುವ ರಾಜ್ಯಗಳ ಆಡಳಿತಕ್ಕೆ ಸಂಬಂಧಿಸಿ ನಕರಾತ್ಮಕ ಸುದ್ದಿಗಳನ್ನು ಹೆಚ್ಚು ಬಿತ್ತರಿಸುತ್ತಿವೆ ಎಂದು ಮುಹಮ್ಮದ್ ಝುಬೇರ್ ಹೇಳಿದರು.


ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ನಿರೂಪಕರು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಾರೆ. ಸಾರ್ವಜನಿಕ ಸಮಸ್ಯೆಗಳನ್ನು ಮುಚ್ಚಿ ಹಾಕಲು ಮತ್ತು ಸರಕಾರದ ಹಿತಾಸಕ್ತಿಗಳನ್ನು ಕಾಪಾಡಲು ಕೆಲವು ಮಾಧ್ಯಮಗಳು ವಿಷಯಾಂತರಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜು ಆಸ್ಪತ್ರೆಯೊಂದರಲ್ಲಿ ನಡೆದ ಘಟನೆಯನ್ನು ನಿದರ್ಶನವಾಗಿ ಉಲ್ಲೇಖಿಸಿದ ಮುಹಮ್ಮದ್ ಝುಬೇರ್, ತೃಣಮೂಲ ಕಾಂಗ್ರೆಸ್ ಮತ್ತು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಗುರಿಯಾಗಿಸಿಕೊಂಡು ಆ ಕೃತ್ಯವನ್ನು ರಾಜಕೀಯಗೊಳಿಸುವ ಉದ್ದೇಶದಿಂದ ತಪ್ಪುಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಯಿತು ಎಂದರು.

ಈದಿನ ನ್ಯೂಸ್ ಆ್ಯಪ್‌ ಅನ್ನು ಕರ್ನಾಟಕ ಥಿಯೋಲಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ. ಡಾ.ಎಚ್.ಎಂ.ವಾಟ್ಸನ್ ಬಿಡುಗಡೆಗೊಳಿಸಿ ಮಾತನಾಡಿದರು. ಈದಿನ ಸಮುದಾಯ ವಿಭಾಗದ ಮುಖ್ಯಸ್ಥ ಡಾ. ವಾಸು ಎಚ್.ವಿ.ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ., ಡೀಡ್ಸ್ ಸಂಸ್ಥೆಯ ಸಮಾಜ ಸೇವಕಿ ಜೆಸಿಂತಾ ಪಿರೇರ ಉಪಸ್ಥಿತರಿದ್ದರು.


ಈದಿನ ಡಾಟ್ಕಾಮ್ ನ ಗವರ್ನಿಂಗ್ ಕೌನ್ಸಿಲ್ ಸದಸ್ಯ ಡೆನಿಸ್ ಡಿಸಿಲ್ವ ಸ್ವಾಗತಿಸಿದರು. ಹಣಕಾಸು ವಿಭಾಗದ ಮುಖ್ಯಸ್ಥ ಉಮರ್ ಯು.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಗವರ್ನಿಂಗ್ ಕೌನ್ಸಿಲ್ ಸದಸ್ಯ ಲಕ್ಷ್ಮಣ್ ಕುಂದರ್ ವಂದಿಸಿದರು. ಪವಿತ್ರಾ ಜಿ.ಎಂ.‌ ಕಾರ್ಯಕ್ರಮ ನಿರೂಪಿಸಿದರು.










Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News