ಮಂಗಳೂರಿನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ: ದಿನೇಶ್ ಗುಂಡೂರಾವ್
ಮಂಗಳೂರು, ಆ. 15: ರಾಜ್ಯದಲ್ಲಿ ಸುಸ್ಥಿರ ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಜಿಸುವಂತಹ ಆಕರ್ಷಕ ನಗರಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಗಳೂರು ನಗರದ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ.
ಮಳೆಯ ಸಿಂಚನದ ನಡುವೆ ನೆಹರೂ ಮೈದಾನದಲ್ಲಿ ಗುರುವಾರ ನಡೆದ ದ.ಕ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
2024 ನೇ ಸಾಲಿನ ಮುಂಗಾರು ಅವಧಿಯನ್ನು ಜಿಲ್ಲಾಡಳಿತ ವತಿಯಿಂದ ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ಇದುವರೆಗೂ ವಾಡಿಕೆಗಿಂತ ಶೇ.14 ಹೆಚ್ಚು ಮಳೆಯಾಗಿದೆ. ಮಳೆಯಿಂದಾಗಿ ಜೂನ್ 2024 ರಿಂದ ಇದೂವರೆಗೂ ಒಟ್ಟು 665 ಮನೆಗಳು ಹಾನಿಯಾಗಿದ್ದು, ಒಟ್ಟು ರೂ. 1.21 ಕೋಟಿ ಪರಿಹಾರವನ್ನು ಮನೆಹಾನಿ ಸಂತ್ರಸ್ತ ಫಲಾನುಭವಿಗಳಿಗೆ ಪಾವತಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ 53 ಕೋಟಿ ರೂ. ವೆಚ್ಚದಲ್ಲಿ 12 ಮಾಡ್ಯುಲರ್ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಒಳಗೊಂಡ ಹೊಸ ಸರ್ಜಿಕಲ್ ಬ್ಲಾಕ್ ನಿರ್ಮಿಸಲಾಗಿದೆ. ವೆನ್‌ಲಾಕ್ ಆಸ್ಪತ್ರೆಯಲ್ಲಿ 35 ಹಾಸಿಗೆಗಳ ಡಯಾಲಿಸಿಸ್ ಕೇಂದ್ರ, ಜೀರಿಯಾಟ್ರಿಕ್ ವಾರ್ಡ್, ಕ್ಯಾಥ್ ಲಾಬ್ ನಿರ್ಮಾಣ ಪ್ರಗತಿಯಲ್ಲಿದೆ. ಇದಲ್ಲದೇ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಮಂಜೂರು ಮಾಡಲಾಗಿದೆ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 1326 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಮಾನ್ಯ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ-4 ರ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 130 ಕೋಟಿ ಮಂಜೂರಾಗಿದ್ದು, 320 ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಯೋಜನೆಗಳು, ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ವಿವರ ನೀಡಿದರು.
ಇದಕ್ಕೂ ಮೊದಲು ಪೊಲೀಸ್ ವಾದ್ಯವೃಂದ, ಸಂಚಾರಿ ಪೊಲೀಸ್, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಆರ್ ಎಸ್ ಪಿ ಬಾಲಕ- ಬಾಲಕಿಯರ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳ ತಂಡಗಳು ಸೇರಿದಂತೆ ಒಟ್ಟು 16 ತಂಡಗಳಿಂದ ಸಚಿವರು ಗೌರವರಕ್ಷೆ ಸ್ವೀಕರಿಸಿದರು. ವಿದ್ಯಾರ್ಥಿಗಳು, ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಮೇಯರ್ ಸುಧೀರ್ ಶೆಟ್ಟಿ , ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಪರ ಜಿಲ್ಲಾಧಿಕಾರಿ ಡಾ . ಸಂತೋಷ್ ಕುಮಾರ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಪಶ್ಚಿಮ ವಲಯ ಐಜಿಪಿ ಬೋರಲಿಂಗಯ್ಯ, ಜಿಪಂ ಸಿಇಒ ಡಾ. ಆನಂದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಭಾರತೀಯರಾದ ನಮ್ಮೆಲ್ಲರಿಗೂ ಅತಿಯಾದ ಗಾಬರಿಯನ್ನು ತರಿಸಿದೆ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ಮಟ್ಟದ ಕ್ರಮಗಳನ್ನು ಕೈಗೊಳ್ಳಬೇಕು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ರಕ್ಷಣೆಯು ಬಹುಸಂಖ್ಯಾತ ಜನರ ಕರ್ತವ್ಯವೆಂದು ಭಾವಿಸಬೇಕು. ಸಕಲ ಮಾನವ ಸಂಕುಲ ಶಾಂತಿ ಮತ್ತು ಸೌಹಾರ್ದತೆ ಯಿಂದ ಬಾಳಲಿ ಎಂಬುದು ನಮ್ಮ ಸಂಕಲ್ಪ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅವರು ಹೇಳಿದರು.