ಕೈಕಂಬ: ಬೈಕ್ - ಟಿಪ್ಪರ್ ನಡುವೆ ಅಪಘಾತ; ಓರ್ವ ಮೃತ್ಯು
ಕೈಕಂಬ: ಬೈಕ್ ಮತ್ತು ಟಿಪ್ಪರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಅಡ್ಡೂರು ನಿವಾಸಿಯೊಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಗುರುಪುರ ಸರಕಾರಿ ಕಾಲೇಜು ಬಳಿ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ.
ಮೃತರನ್ನು ಅಡ್ಡೂರು ಕಾಂಜರಕೋಡಿ ಮಸೀದಿ ಬಳಿಯ ನಿವಾಸಿ ಡಿ.ಎಸ್. ಅಬ್ದುಲ್ ರಹೀಮ್ (62) ಎಂದು ತಿಳಿದು ಬಂದಿದ್ದು, ಅವರೊಂದಿಗಿದ್ದ ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಹೀಮ್ ಅವರು ಮಂಗಳೂರಿನಿಂದ ಕೈಕಂಬಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಇವರ ಹಿಂದಿನಿಂದ ಬಂದ ಬೈಕ್ ಸವಾರ ಓವರ್‌ಟೇಕ್ ಮಾಡುವ ಭರದಲ್ಲಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಅಬ್ದುಲ್ ರಹೀಮ್ ಅವರ ದ್ವಿಚಕ್ರ ವಾಹನ ಅವರ ಎದುರಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಘಟನೆಯಿಂದ ಅವರ ತಲೆ ಸಹಿತ ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ತಕ್ಷಣ ಸ್ಥಳೀಯರು ಮತ್ತು ಸಹ ವಾಹನ ಸವಾರರು ಅಬ್ದುಲ್ ರಹೀಮ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ದಾರಿಮಧ್ಯೆ ಅವರು ಮೃತ ಪಟ್ಟರೆಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಬುಧವಾರ ಅಡ್ಡೂರು ಜುಮಾ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲ ಮಾಹಿತಿ ನೀಡಿದೆ.
ಮೃತ ಅಬ್ದುಲ್ ರಹೀಮ್ ಅವರು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‌ನ ಸ್ಥಾಪಕ ಸದಸ್ಯರಾಗಿದ್ದು, ಸಾರಾ ಆಂಗ್ಲ ಮಾಧ್ಯಮ ಶಾಲೆಯ ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿದ್ದರು. ಅವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.