ಕೃಷ್ಣ ಶೆಟ್ಟಿ ಅವರ ಬದುಕು ಆದರ್ಶಪ್ರಾಯವಾದುದು: ಎಂ. ವೀರಪ್ಪ ಮೊಯ್ಲಿ
ಮಂಗಳೂರು, ಸೆ.1: ಕೃಷ್ಣಶೆಟ್ಟಿ ಅವರ ಬದುಕು, ತತ್ವಗಳು ನನ್ನ ಜೀವನದಲ್ಲಿ ಪ್ರಭಾವ ಬೀರಿವೆ. ಸ್ಪೂರ್ತಿಯುತ ವ್ಯಕ್ತಿ ಕೃಷ್ಣಶೆಟ್ಟಿ ಯವರ ಬದುಕು ಆದರ್ಶಪ್ರಾಯವಾದದ್ದು ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಾ. ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ, ಕಜೆಮಾರು ಕೆದಂಬಾಡಿ ಪುತ್ತೂರು ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ "ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ರಾಜಕೀಯ, ಆರ್ಥಿಕ, ನೈತಿಕ ಮತ್ತು ಬಡತನ ನಿರ್ಮೂಲನೆ ಯಂತಹ ಹಲವಾರು ಅಂಶಗಳನ್ನು ಒಳ ಗೊಂಡಿದೆ. ಅವುಗಳನ್ನು ನಾವು ಸಾಧಿಸಿದ್ದೇವೆಯೇ, ಸಂವಿಧಾನದಲ್ಲಿನ ಮೂಲಭೂತ ಕರ್ತವ್ಯಗಳ ಪಾಲನೆಯಾಗು ತ್ತಿದೆಯೇ ಎನ್ನುವ ಪ್ರಶ್ನೆ ಕೇಳಿಕೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಯರಾಜ್ ಅಮೀನ್, ಸರಕಾರ ಮತ್ತು ಅಧಿಕಾರಿಗಳ ನಡುವಿನ ಸಂಬಂಧ ಚೆನ್ನಾಗಿದ್ದರೆ, ಹೊಂದಾಣಿಕೆ ಆದರೆ ನಾಡು ಅಭಿವೃದ್ಧಿಯತ್ತ ಸಾಗಬಲ್ಲದು. ಪ್ರಸ್ತುತ ನಾವು ಯಾವ ಕಡೆ ಸಾಗುತ್ತಿದ್ದೇವೆ? ಸಂವಿಧಾನದ ಆಶಯದ ಪ್ರಕಾರವಾಗಿಯೇ ನಾವು ನಡೆಯುತ್ತಿದ್ದೇವೆಯೇ ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ, ಎಂದು ಹೇಳಿದರು. ಇದೇ ಸಂದರ್ಭದಲ್ಲಿ ʼಸಮಾನತೆಗಾಗಿ ಸಂಘರ್ಷʼ (ಹೋರಾಟದಲ್ಲೇ ಕೃಷ್ಣ ಶೆಟ್ಟಿ ಬದುಕು) ಮತ್ತು ʼಮಣ್ಣಿಗೆ ಮರಳುವ ಮುನ್ನʼ ( ಶ್ರೀ ಕೆ ಪ್ರಮೋದ್ ರೈ ಯವರ ಸರಕಾರಿ ಸೇವೆಯಿಂದ ಹೊಲದೆಡೆಗಿನ ನಡೆ) ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಸಚಿವ ಮತ್ತು ಪಾಲಿಟ್ ಬ್ಯುರೋ ಸದಸ್ಯ ಸಿ.ಪಿ.ಐ.(ಎಂ) ಕಾಮ್ರೆಡ್ ಎಂ. ಎ ಬೇಬಿ, ಮಾಜಿ ಪಾರ್ಲಿಮೆಂಟ್ ಸದಸ್ಯ ಕಾಮ್ರೇಡ್ ಕರುಣಾಕರನ್, ಎ. ಕೆ. ಗೋಪಾಲನ್ ರವರ ಪುತ್ರಿ ಲೈಲಾ ಕರುಣಾ ಕರನ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಹ್ಮಣ್ಯನ್, ನಿವೃತ್ತ ಸೆಂಟ್ರಲ್ ಆಡಳಿತ ಟ್ರಿಬ್ಯೂನಲ್ ಸದಸ್ಯ ಸುಧೀರ್ ಕುಮಾರ್, ವಿದ್ಯಾರ್ಥಿಗಳು, ಉಪನ್ಯಾಸಕರು ಮೊದಲಾದವರು ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಅಧಿಕಾರಿ ಡಾ. ಭಾರತಿ ಪಿಲಾರ್ ಕಾರ್ಯಕ್ರಮ ಸ್ವಾಗತಿಸಿ, ಪ್ರಮೋದ್ ಕುಮಾರ್ ರೈ ಸ್ವಾಗತಿಸಿದರು. ವಿ.ವಿ. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ. ವಂದಿಸಿದರು. ಇದೇ ಸಂದರ್ಭದಲ್ಲಿ ʼಸರ್ವ ಸಮಾನತೆ- ಗಾಂಧೀಜಿ ವಿಚಾರಧಾರೆಯ ಪ್ರಸ್ತುತತೆʼ ಮತ್ತು ʼನಾಗರಿಕ ಸೇವೆಯಲ್ಲಿ ಸ್ವಚ್ಛತೆ ಮತ್ತು ಪ್ರಾಮಾಣಿಕತೆʼ ಎಂಬ ವಿಷಯಗಳ ಕುರಿತು ವಿಚಾರ ಸಂಕಿರಣ ನಡೆಯಿತು.